ಪತಿ-ಪತ್ನಿ ಜಗಳ ಪತ್ನಿಯ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ.
ಪತಿ-ಪತ್ನಿ ಜಗಳ ಪತ್ನಿಯ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ.
ಆನೇಕಲ್: ತಾಲೂಕಿನ ಸೂರ್ಯನಗರ ಠಾಣೆ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಪತಿ, ಪತ್ನಿ ಜಗಳ ತಾರಕಕ್ಕೇರಿ ಪತ್ನಿಯ ಕೊಲೆ ಮಾಡಿ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಒಡಿಶಾ ಮೂಲದ ದೀಪಾಂತ ಸಬರ(31) ಮತ್ತು ಆತನ ಪತ್ನಿ ಮಂಜುಳಾ ಸಬರ(27) ಮೃತರಾಗಿದ್ದಾರೆ.
20 ದಿನದಿಂದಷ್ಟೇ ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ದೀಪಾಂತ ಹಾಗೂ ಪತ್ನಿ ಮಂಜುಳಾ ನಡುವೆ ಜಗಳ ಉಂಟಾಗಿದ್ದು, ಕೋಪದಲ್ಲಿ ಪತ್ನಿಯನ್ನು ಕೊಲೆ ಮಾಡಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಬಳಿಕ ಆತನು ಕೂಡ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆ ಮಾಲೀಕ ಶಿವಕುಮಾರ್ 20 ದಿನದ ಹಿಂದೆ ದಂಪತಿಗೆ ಬಾಡಿಗೆ ಮನೆ ಕೊಟ್ಟಿದ್ದರು. ಗುರುವಾರ ರಾತ್ರಿ ಶಿವಕುಮಾರ್ ತಾಯಿ ಚೌಡಮ್ಮ ಮನೆ ಬಳಿ ನೋಡಿದಾಗ ಮಂಚದ ಮೇಲೆ ಮಹಿಳೆ ಶವ ಕಾಣಿಸಿದೆ. ಕೂಡಲೇ ಸೂರ್ಯ ನಗರ ಪೊಲೀಸರಿಗೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಪತ್ನಿ ಶವದ ಮುಂದೆ ಪತಿ ಅಳುತ್ತಲೇ ವಲಸೆಲ್ಫಿ ವಿಡಿಯೋ ಮಾಡಿ ಅನಂತರ ನೇಣಿಗೆ ಶರಣಾಗಿರುವುದು ಪೊಲೀಸರಿಗೆ ಸಿಕ್ಕ ಮೊಬೈಲ್ನಲ್ಲಿ ಬೆಳಕಿಗೆ ಬಂದಿದೆ.
ಅಲ್ಲದೆ ಒಡಿಸಾ ಭಾಷೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಬಂದ ಸೂರ್ಯನಗರ ಪೊಲೀಸರು ಮನೆಯ ಬಾಗಿಲು ಮುರಿದು ನೋಡಿದಾಗ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತು ಮಂಚದ ಮೇಲೆ ಪತ್ನಿ ಕೊಲೆಯಾಗಿರುವುದು ಗೊತ್ತಾಗಿದೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ದಿನದ ಹಿಂದೆ ಘಟನೆ ನಡೆದಿರುವ ಸಾಧ್ಯತೆ ಇದ್ದು, ಮೃತ ದೇಹಗಳು ಕೊಳೆಯುವ ಸ್ಥಿತಿಗೆ ಬಂದಿದ್ದವು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ದೇಹಗಳನ್ನು ಹಸ್ತಾಂತರಿಸಲಾಗಿದೆ. ಡಿವೈಎಸ್‌ಪಿ ಮಲ್ಲೇಶ್ ಗೌಡ, ಸೂರ್ಯ ನಗರ ಠಾಣೆಯ ಇನ್‌ಸ್ಪೆಕ್ಟರ್ ಸಂಜೀವ್ ಮಹಾಜನ್ ಸ್ಥಳ ಪರಿಶೀಲನೆ ನಡೆಸಿದರು.
ದೀಪಂತ್ ಸಬರ್ ತನ್ನ ಡೆತ್ ನೋಟ್ ನಲ್ಲಿ ಹೀಗೆ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
[ನಾನು ದೀಪಂತ್ ಸಬರ್, ಇಂದು ನನ್ನ ಜೀವನವನ್ನ ಕೊನೆಗೊಳಿಸುತ್ತಿರುವೆ.
ನಾನು ಮಂಜುಳಾ ಸಬರ್ ಜೊತೆಗೆ ಪ್ರೇಮಾಂಕುರಗೊಂಡಿದ್ದೇನೆ. ಕಳೆದ ರಾತ್ರಿ ಒಂದು ಗಂಟೆಯಲ್ಲಿ ಜಗಳ ಮಾಡಿಕೊಂಡೆವು. ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು. ಆಕೆ ಇಲ್ಲದೆ ನಾನು ಬದುಕಲಾರೆ, ಆದ್ದರಿಂದ ನಾನು ನನ್ನ ಕೊನೆಯ ನಿರ್ಧಾರ ತೆಗೆದುಕೊಂಡಾಗಿದೆ. ಈ ಘಟನೆಗೆ ಯಾರೂ ಹೊಣೆಗಾರರಲ್ಲ. ಇದು ನಮ್ಮ ತಪ್ಪು ನಿರ್ದಾರ.
ತಾರಮಣಿ ನನ್ನ ಮಕ್ಕಳ ಜವಾಬ್ದಾರಿ ತಗೋ, ನಿನ್ನೊಂದಿಗೆ ನಾನು ಯಾವ ತೊಂದರೆಯನ್ನೂ ಅನುಭವಿಸಿಲ್ಲ.
ಅಪ್ಪ-ಅಮ್ಮ ಕ್ಷಮಿಸಿಬಿಡಿ.]

