ಯುದ್ದ ಬೇಡ ಗ್ಯಾಸ್ ಬೇಕು, ಹಿಂದಿ ಬೇಡ ಕನ್ನಡ ಬೇಕು. ಇಲ್ಲ ಸಿಎಂ ಮನೆ ಮುಂದೆ ಹಗಲಿರುಳು ಹೋರಾಟ ಎದುರಿಸಿ, -ವಾಟಾಳ್ ನಾಗರಾಜ್ ಎಚ್ಚರಿಕೆ.
ಬೆಂ,ಆನೇಕಲ್: ಬಜೆಟ್ನಲ್ಲಿ ಈಗಾಗಲೇ 800 ಆಂಗ್ಲ ಶಾಲೆಗಳನ್ನ ತೆರೆಯಲು 3900 ಕೋಟಿ ರೂಗಳನ್ನು ಘೋಷಿಸಿದೆ. ಇದರಿಂದ ಕರ್ನಾಟಕದಲ್ಲಿ ಕನ್ನಡಿಗರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.
ಆದರೆ, 30 ವರ್ಷಗಳಿಂದ ಹೊರನಾಡ ಕನ್ನಡ ಶಾಲೆಗಳಿಗೆ ನಯಾ ಪೈಸೆ ಈ ವರೆಗೆ ಯಾವ ಸರ್ಕಾರಗಳೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ.
ಮುಂದಿನ ಬಜೆಟ್ನಲ್ಲಿ 500 ಕೋಟಿಯನ್ನು ಹೊರನಾಡ ಶಾಲೆ(ಕಾಸರಗೂಡು, ಹೊಸೂರು, ತಾಳವಾಡಿ, ಸೊಲ್ಲಾಪುರ ಮತ್ತು ಮಡಕಶಿರಾ)ಗಳಿಗೆ ಅನುದಾನ ಬಿಡುಗಡೆ ಮಾಡಲೇ ಬೇಕು ಎಂದು ಪಟ್ಟು ಹಿಡಿದರು.
ಕನ್ನಡ ವಿರೋಧಿ ನಿಲುವುಗಳನ್ನು ಕೈಬಿಡದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ 23ರಂದು ಹಗಲಿರುಳು ಪ್ರತಿಭಟನೆಗೆ ತೀರ್ಮಾನಿಸಲಾಗಿದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದರು.
ಅವರು ಶನಿವಾರ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಅತ್ತಿಬೆಲೆ ಗಡಿಯಲ್ಲಿ ಗ್ಯಾಸ್ ನೀಡಿ ಯುದ್ದ ನಿಲ್ಲಿಸಿ, ಹಿಂದಿ ಬೇಡ ಕನ್ನಡ ಉಳಿಸಿ ಎಂಬ ಹೋರಾಟ ಹಮ್ಮಿಕೊಂಡಿದ್ದರು.
ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದದಿಂದ ಕರ್ನಾಟಕದಲ್ಲಿ ಗ್ಯಾಸ್ ಅಲಭ್ಯತೆ ಕಾಡುತ್ತಿದೆ. ಕೂಡಲೇ ಕೇಂದ್ರ ಮಂತ್ರಿಗಳು, ನಮ್ಮ ಸಂಸದರು ಮೌನ ಮುರಿದು ದನಿ ಎತ್ತಬೇಕೆಂದರು.
ರೈಲ್ವೇ, ಬ್ಯಾಂಕ್ ಇನ್ನಿತರೆ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಕನ್ನಡವನ್ನ ಕಡೆಗಣಿಸಿ ಹಿಂದಿ ಹೇರಲಾಗುತ್ತಿದೆ ಇದರಿಂದ ರಾಜ್ಯದ ಯುವಜನತೆ ನಿರುದ್ಯೋಗಕ್ಕೆ ನೂಕಲ್ಪಡುತ್ತಿದ್ದಾರೆ.
ಇತ್ತ ರಾಜ್ಯ ಸರ್ಕಾರವೂ ಕನ್ನಡಕ್ಕೆ ಆಧ್ಯತೆ ನೀಡುತ್ತಿಲ್ಲ, ಅತ್ತ ಕೇಂದ್ರ ಹಿಂದಿ ಹೇರಿಕೆಯಿಂದ ಕನ್ನಡ ಕೊಲ್ಲಲ್ಪಡುತ್ತಿದೆ ಎಂದರು.
ಹೀಗಾಗಿ ಮಾರ್ಚ್ 28 ರಂದು ಬೆಂಗಳೂರು ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ತಡೆದು ರಸ್ತೆ ಬಂದ್ ಮಾಡಲು ತೀರ್ಮಾನಿಸಿದ್ದೇವೆ.
ಮುಂದಿನ ತಿಂಗಳು ಚಿತ್ರದುರ್ಗ, ದಾವಣಗೆರೆ ರಸ್ತೆಗಳ ಬಂದ್. ಅಲ್ಲಿಗೂ ಮಣಿಯದಿದ್ದರೆ ದೇವನಹಳ್ಳಿ ಏರ್ಪೋರ್ಟ್ ರಸ್ತೆ ಬಂದ್ ಮಾಡಲಾಗುವುದೆಂದರು.
ಗ್ಯಾಸ್ ಸಮಸ್ಯೆ ಕೂಡಲೇ ಬಗೆ ಹರಿಯಬೇಕು. ಮಹದಾಯಿ, ಮೇಕೆದಾಟು, ಕೃಷ್ಣ ಮೇಲ್ದಂಡೆ ಯೋಜನೆಗಳನ್ನು ರಾಜ್ಯ ಕೈಗೆತ್ತಿಕೊಳ್ಳಬೇಕು ಕನ್ನಡ ಶಾಲೆಗಳು ಮುಚ್ಚಬಾರದು ಎಂದು ಕರೆ ನೀಡಿದರು. ಕನ್ನಡ ಕುಮಾರ್, ಕಜಾವೇ ಕೆ ಮಂಜುನಾಥದೇವ ಮಾತನಾಡಿದರು.
ಎಂದಿನಂತೆ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಬಂಧಿಸುವ ವೇಳೆ ಪೊಲೀಸರ ಮೇಲೆ ಹರಿಹಾಯ್ದದ್ದು ಕಂಡು ಬಂತು. ಇದಕ್ಕೆ ಪೊಲೀಸರು ಚಕಾರವೆತ್ತದೆ ಮೌನವಹಿಸಿ ತಮ್ಮ ಕಾರ್ಯವನ್ನು ಮುಂದುವರೆಸಿದರು.
ನೂರಾರು ಕಾರ್ಯಕರ್ತರು ರಸ್ತೆ ಮೇಲೆಯೇ ಖಾಲಿ ಗ್ಯಾಸ್ ಸಿಲೆಂಡರ್ ಪಾತ್ರೆ ಇಟ್ಟು ಪ್ರತಿಭಟನೆ ನಡೆಸಿದರು. ಅತ್ತಿಬೆಲೆ ಪೊಲೀಸರು ಹೆದ್ದಾರಿ ತಡೆಯಲು ಯತ್ನಿಸಿದ ಹೋರಾಟಗಾರರನ್ನು ತಡೆದು ಬಂಧಿಸಿ ಬಿಡುಗಡೆ ಮಾಡಿದರು.
ಕನ್ನಡ ಪರ ಹೋರಾಟದಿಂದ ಬೆಂಗಳೂರು-ಹೊಸೂರು ಮುಖ್ಯ ರಸ್ತೆಯಲ್ಲಿ ಸಾಗುವ ಅಂತರರಾಜ್ಯ ವಾಹನಗಳು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.
ಅನಂತರ ಅತ್ತಿಬೆಲೆ ಪೊಲೀಸರ ಸಹಕಾರದಿಂದ ಹೋರಾಟಗಾರರ ಮನವೊಲಿಸಿ ಹೆದ್ದಾರಿಯಲ್ಲಿನ ವಾಹನಗಳನ್ನು ಸರಾಗವಾಗಿ ಸಾಗುವಂತೆ ಕ್ರಮ ಕೈಗೊಂಡರು.

