ಕೆ.ಆರ್.ಎಸ್. ಪಕ್ಷದ ವತಿಯಿಂದ ಧಿಕ್ಕಾರದ ಬದಲು ಜೈಕಾರ ಕೂಗಿ ವಿನೂತನ ಶೈಲಿಯಲ್ಲಿ ಪ್ರತಿಭಟನೆ
1 min read
ತುರುವೇಕೆರೆ: ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ತಾಲೂಕು ಈ.ಒ. ವಿರುದ್ಧ ಪಟ್ಟಣದ ಪ್ರವಾಸಿ ಮಂದಿರದಿಂದ ಕಾಲ್ನಡಿಗೆ ಜಾಥ ನಡೆಸಿ ತಾಲೂಕು ಈ ಓ ವಿರುದ್ಧ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡು ಜೊತೆಗೆ ಕೆಆರ್‌ಎಸ್ ಪಾರ್ಟಿಯ ಪದಾಧಿಕಾರಿ ಮೇಲೆ ಗೂಂಡಾ ವರ್ತನೆ ಮಾಡಿಸಿದ್ದಾರೆ ಹಾಗಾಗಿ ಅವರಿಗೆ ಧಿಕ್ಕಾರದ ಬದಲು ಜೈಕಾರವಿರಲಿ ಎಂಬ ವಿನೂತನ ಘೋಷಣೆ ಕೂಗುತ್ತಾ ತಾಲೂಕು ಪಂಚಾಯಿತಿ ಆವರಣಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಎಸ್ ಮಾತನಾಡಿ ಇ.ಒ. ಶಿವರಾಜಯ್ಯ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡಿರುವ ವಿರುದ್ಧ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಕುರಿತಾಗಿ ಗಂಭೀರವಾಗಿ ಆರೋಪಿಸಿದ ಅವರು ಸಂಬಂಧಪಟ್ಟ ಅಧಿಕಾರಿಗಳು ಇ.ಒ. ಅವರನ್ನು ಕರ್ತವ್ಯದಿಂದ ವಜಾ ಗೊಳಿಸುವಂತೆ ಆಗ್ರಹಿಸಿದರು ನಂತರ ಈ ಓ ಕಚೇರಿ ಒಳಗೆ ಪ್ರವೇಶಿಸಿ ಈ ಓ ಶಿವರಾಜಯ್ಯ ಕೂರುವ ಖಾಲಿ ಕುರ್ಚಿಗೆ ಶಾಲು ಹೊದಿಸಿ ಪೇಟ ತೊಡಿಸಿ ಹಾರ ಹಾಕುವುದರ ಮೂಲಕ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಎಲ್ ಜೀವನ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ. ರಘುನಂದನ ರಾಜ್ಯ ಸಂಘಟನಾ ಕಾರ್ಯದರ್ಶಿ. ಶ್ರೀನಿವಾಸ ಮೂರ್ತಿ ಜಿಲ್ಲಾಧ್ಯಕ್ಷರು. ಚೆನ್ನಯ್ಯ ಎಸ್‌ಸಿ/ಎಸ್‌ಟಿ ರಾಜ್ಯ ಕಾರ್ಯದರ್ಶಿ. ತಿಮ್ಮಪ್ಪ ಪದಾಧಿಕಾರಿ ಸೇರಿದಂತೆ ಕೆ.ಆರ್.ಎಸ್ ಪಕ್ಷದ ಮಹಿಳಾ ಪದಾಧಿಕಾರಿಗಳು, ಹಲವು ಭಾಗದ ಕಾರ್ಯಕರ್ತರು, ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.
ವರದಿ, ಮಂಜುನಾಥ್ ಕೆ ಎ
ತುರುವೇಕೆರೆ.
