c24kannada

ವಸ್ತುಸ್ಥಿತಿಯತ್ತ

ಆಪರೇಷನ್ ಸಿಂಧೂರ  ಕಾರ್ಯಚರಣೆ ಹಿನ್ನೆಲೆ ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಜಮೀರ್ ಸಂದೇಶ

 

ಬೆಂಗಳೂರು : ಆಪರೇಷನ್ ಸಿಂಧೂರ  ಕಾರ್ಯಚರಣೆ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ವಕ್ಫ್ & ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್  ಅವರು ಸಂದೇಶ ರವಾನಿಸಿದ್ದಾರೆ. ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಮೂರು ಸಶಸ್ತ್ರ ಪಡೆಗಳ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ನಾಳೆ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಸಚಿವ ಬಿ ಝಡ್ ಜಮೀರ್ ಅಹ್ಮದ್ ಅವರು ವಕ್ಫ್ ಬೋರ್ಡ್ ಸಿಇಒಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.

 

ಪಹಲ್ಗಾಮ್​ನಲ್ಲಿ ಉಗ್ರರ ದಾಳಿ ಹಿನ್ನೆಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತದ ಸೈನಿಕರ ಶ್ರೇಯಸ್ಸು ಮತ್ತು ಶಕ್ತಿ ತುಂಬಲು ವಕ್ಫ್ ಬೋರ್ಡ್ ವ್ಯಾಪ್ತಿಯ ಮಸೀದಿಗಳು ಸೇರಿ ಎಲ್ಲಾ ಮಸೀದಿಗಳಲ್ಲಿ ನಾಳೆ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ತಿಳಿಸಲಾಗಿದೆ. ರಾಜ್ಯದ ಮುಜುರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಭಾರತೀಯ ಸೇನೆ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಸುತ್ತೋಲೆ ಹೊರಬಿದ್ದ ಬೆನ್ನಲ್ಲೇ ಮಸ್ಲಿಮರಿಗೂ ಸಹ ಮಸೀದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಹೇಳಬೇಕೆಂಬ ಕೂಗು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಇಂತಹದೊಂದು ಸೂಚನೆ ನೀಡಿದ್ದು ಮೆಚ್ಚುಗೆಗೆ ಕಾರಣವಾಗಿದೆ.

 

ಇನ್ನು ಮೊನ್ನೆ ಅಷ್ಟೇ ಇದೇ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪಾಕಿಸ್ತಾನ ವಿರುದ್ಧ ಯುದ್ಧ ಮಾಡುವುದಾದರೆ ನಾನು ಸೂಸೈಡ್ ಸೂಟ್ ತೊಟ್ಟು ಹೋಗಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಆಗಿತ್ತು. ಇದರ ಮಧ್ಯ ಈಗ ಭಾರತ ಸೈಕರ ಶ್ರೇಯಸ್ಸಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಸೂಚನೆ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!