ಕ್ವಾಂಟಂ, ಎಐ ಮತ್ತು ಡೀಪ್‌ಟೆಕ್ ಸಂಶೋಧನೆಗೆ ಉತ್ತೇಜನ ನೀಡಲು ಅಲಯನ್ಸ್ ವಿಶ್ವವಿದ್ಯಾಲಯದಿಂದ ‘AU-QUASAR’ ಅನಾವರಣ
ಕ್ವಾಂಟಂ, ಎಐ ಮತ್ತು ಡೀಪ್‌ಟೆಕ್ ಸಂಶೋಧನೆಗೆ ಉತ್ತೇಜನ ನೀಡಲು ಅಲಯನ್ಸ್ ವಿಶ್ವವಿದ್ಯಾಲಯದಿಂದ ‘AU-QUASAR’ ಅನಾವರಣ
‘Demystifying Quantum’ ಕಾರ್ಯನಿರ್ವಾಹಕ ಸಂವಾದ ಯಶಸ್ವಿ
ಬೆಂಗಳೂರು: ಅಲಯನ್ಸ್ ಕೇಂದ್ರ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ “Demystifying Quantum: An Executive Dialogue on Quantum Technologies, AI and DeepTech” ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿಜ್ಞಾನ, ಅಕಾಡೆಮಿಯಾ, ಕೈಗಾರಿಕೆ, ಸಂಶೋಧನೆ, ಸೈಬರ್ ಸುರಕ್ಷತೆ, ಡೇಟಾ ಸೈನ್ಸ್, ಸ್ವಯಂಚಾಲಿತ ಚಲನಶೀಲತೆ, ಉದ್ಯಮಶೀಲತೆ ಹಾಗೂ ಸಾರ್ವಜನಿಕ ನೀತಿ ಕ್ಷೇತ್ರಗಳ ಗಣ್ಯರನ್ನು ಒಂದೇ ವೇದಿಕೆಯಡಿ ಸೇರಿಸಿ ಸಂವಾದ ಏರ್ಪಡಿಸಿತ್ತು.
ಈ ಸಂದರ್ಭದಲ್ಲಿ AU-QUASAR (Alliance University – Quantum AI School for Advanced Research) ಎಂಬ ನೂತನ ಸಂಶೋಧನೆಯನ್ನು ಅನಾವರಣಗೊಳಿಸಲಾಯಿತು. ಬೆಂಗಳೂರು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸ್ಥಾಪಿತವಾಗಿರುವ ಈ ಕೇಂದ್ರವು ಕ್ವಾಂಟಂ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್‌ಟೆಕ್ ಕ್ಷೇತ್ರಗಳಲ್ಲಿ ಸಂಶೋಧನೆ, ನಾವೀನ್ಯತೆ, ಕೈಗಾರಿಕಾ ಸಹಭಾಗಿತ್ವ ಮತ್ತು ಅಂತರಶಿಸ್ತೀಯ ಅಧ್ಯಯನಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪದ್ಮಭೂಷಣ ಡಾ. ವಿ.ಕೆ. ಸಾರಸ್ವತ್, ಮಾಜಿ ಸದಸ್ಯರು, ನೀತಿ ಆಯೋಗ ಹಾಗೂ ಅಲಯನ್ಸ್ ವಿಶ್ವವಿದ್ಯಾಲಯದ ರಿಸರ್ಚ್ ಅಂಡ್ ಟೆಕ್ನಾಲಜಿ ಕೌನ್ಸಿಲ್ ಅಧ್ಯಕ್ಷರು, AU-QUASAR ಸ್ಥಾಪನೆಯನ್ನು ಶ್ಲಾಘಿಸಿ, ಭಾರತವು ತಂತ್ರಜ್ಞಾನದ ಬಳಕೆದಾರ ರಾಷ್ಟ್ರದಿಂದ ಸ್ವದೇಶಿ ತಂತ್ರಜ್ಞಾನ ಸೃಷ್ಟಿಕರ್ತ ರಾಷ್ಟ್ರವಾಗಿ ರೂಪುಗೊಳ್ಳಬೇಕೆಂದು ಹೇಳಿದರು. ರಾಷ್ಟ್ರೀಯ ಕ್ವಾಂಟಂ ಮಿಷನ್ ಮಹತ್ವವನ್ನು ಉಲ್ಲೇಖಿಸಿದ ಅವರು, ಸಂಶೋಧನೆ, ಮೂಲಸೌಕರ್ಯ, ಪ್ರತಿಭಾ ಅಭಿವೃದ್ಧಿ ಮತ್ತು ಕೈಗಾರಿಕೆ-ಶೈಕ್ಷಣಿಕ ಸಹಭಾಗಿತ್ವದ ಅಗತ್ಯವನ್ನು ಒತ್ತಿಹೇಳಿದರು.
ಮುಖ್ಯ ಕಾರ್ಯಾಚರಣಾ ಅಧಿಕಾರಿ ಗೋಪಿಕಾ ಚಾಗಂಟಿ, , Quantum AI Global, ಕ್ವಾಂಟಂ ತಂತ್ರಜ್ಞಾನಗಳ ಪರಿವರ್ತನಾತ್ಮಕ ಸಾಮರ್ಥ್ಯವನ್ನು ವಿವರಿಸಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರಲ್ಲಿ ಕುತೂಹಲ ಹಾಗೂ ವೈಜ್ಞಾನಿಕ ಚಿಂತನೆ ಬೆಳೆಸುವ ಅಗತ್ಯವಿದೆ ಎಂದರು. ಕ್ವಾಂಟಂ ಕ್ಷೇತ್ರವು ಕಂಪ್ಯೂಟಿಂಗ್, ಸಂವಹನ, ಆರೋಗ್ಯ, ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಇಂಜಿನಿಯರಿಂಗ್ ಸೇರಿದಂತೆ ಹಲವು ವಲಯಗಳಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದರು.
ಪ್ರೊ-ಚಾನ್ಸಲರ್ ಅಭಯ್ ಜಿ. ಚೆಬ್ಬಿ, ಮಾತನಾಡಿ, AU-QUASAR ಅಕಾಡೆಮಿಯಾ, ಕೈಗಾರಿಕೆ, ನೀತಿ ನಿರೂಪಕರು – ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಸಹಯೋಗಿ ವೇದಿಕೆಯಾಗಿದ್ದು, ವಾಸ್ತವ ಜಗತ್ತಿನ ಸವಾಲುಗಳಿಗೆ ಕ್ವಾಂಟಂ ಆಧಾರಿತ ಪರಿಹಾರಗಳನ್ನು ರೂಪಿಸಲು ನೆರವಾಗಲಿದೆ ಎಂದು ಹೇಳಿದರು.
ಡಾ. ಬಿ. ಪ್ರೀಸ್ಟ್ಲಿ ಶಾನ್, ಉಪಕುಲಪತಿ, ಅಲಯನ್ಸ್ ವಿಶ್ವವಿದ್ಯಾಲಯ, ತಂತ್ರಜ್ಞಾನ ಅಭಿವೃದ್ಧಿಯ ವೇಗವನ್ನು ಉಲ್ಲೇಖಿಸಿ, “AU-QUASAR ಸ್ಥಾಪನೆಯು ಅಲಯನ್ಸ್ ವಿಶ್ವವಿದ್ಯಾಲಯದ ಮುಂಚೂಣಿ ಸಂಶೋಧನೆ ಮತ್ತು ನವೋದ್ಯಮಿಗಳ ಮುಂದಿನ ತಲೆಮಾರನ್ನು ಬೆಳೆಸುವ ಬದ್ಧತೆಯ ಪ್ರತೀಕವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅದಿತ್ಯ ಲೋಚಾರ್ಲಾ, ಸಂಸ್ಥಾಪಕರು, Raivata Bionex Pvt. Ltd., ಕ್ವಾಂಟಂ ಕಂಪ್ಯೂಟಿಂಗ್‌ನ ಮೂಲ ತತ್ವಗಳು, ಕ್ಯೂಬಿಟ್‌ಗಳು, ಸೂಪರ್‌ಪೊಸಿಷನ್, ಎಂಟ್ಯಾಂಗಲ್‌ಮೆಂಟ್ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇದೇ ವೇಳೆ ಡಾ. ದಿನೇಶ್ ಕುಮಾರ್ ಮುರುಗೇಶನ್ ಮತ್ತು ಡಾ. ಅಂಜನಿ ಪ್ರಿಯದರ್ಶಿನಿ ಅವರ ನಡುವಿನ ಫೈರ್‌ಸೈಡ್ ಸಂವಾದದಲ್ಲಿ ಕ್ವಾಂಟಂ ತಂತ್ರಜ್ಞಾನದ ಅನ್ವಯಿಕೆಗಳು, ವೃತ್ತಿ ಅವಕಾಶಗಳು ಹಾಗೂ ಅಂತರ್‌ಶಿಸ್ತೀಯ ಕಲಿಕೆಯ ಮಹತ್ವ ಚರ್ಚೆಗೆ ಒಳಪಟ್ಟವು.
ನಂತರ ನಡೆದ ಕಾರ್ಪೊರೇಟ್ ಪ್ಯಾನಲ್ ಚರ್ಚೆಯಲ್ಲಿ EY, Bottomline, AUMOVIO, Dell Technologies ಹಾಗೂ Takshashila Institutionನ ತಜ್ಞರು ಭಾಗವಹಿಸಿ, ಕ್ವಾಂಟಂ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಡೇಟಾ ಸೈನ್ಸ್ ಕೈಗಾರಿಕೆಗಳ ಭವಿಷ್ಯವನ್ನು ಹೇಗೆ ರೂಪಿಸುತ್ತಿವೆ ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಂಗವಾಗಿ “The Art of Articulation” ವಿಷಯದ ಕುರಿತು ಮನೀಶ್ ಝಾನ್ವರ್, ಪ್ರೊಫೆಸರ್ ಆಫ್ ಪ್ರಾಕ್ಟಿಸ್, ಅಲಯನ್ಸ್ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಸಂವಹನ ಕೌಶಲ್ಯದ ಮಹತ್ವವನ್ನು ವಿವರಿಸಿದರು.
ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶನ, ಪ್ರಶ್ನೋತ್ತರ, ನೆಟ್‌ವರ್ಕಿಂಗ್ ಹಾಗೂ ಸಂವಾದಾತ್ಮಕ ಅಧಿವೇಶನಗಳೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಸುರೇಖಾ ಶೆಟ್ಟಿ, ರಿಜಿಸ್ಟ್ರಾರ್ ಜನರಲ್, ಅಲಯನ್ಸ್ ವಿಶ್ವವಿದ್ಯಾಲಯ, ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಅತಿಥಿಗಳು, ವಕ್ತಾರರು, ವಿದ್ಯಾರ್ಥಿಗಳು ಹಾಗೂ ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.
“Be Part of the Conversation that Builds the Future” ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಸಂವಾದವು ಕ್ವಾಂಟಂ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಡೀಪ್‌ಟೆಕ್ ಕ್ಷೇತ್ರಗಳಲ್ಲಿ ಭವಿಷ್ಯಮುಖಿ ಶಿಕ್ಷಣ, ಸಂಶೋಧನೆ ಮತ್ತು ನವೋದ್ಯಮಕ್ಕೆ ಅಲಯನ್ಸ್ ವಿಶ್ವವಿದ್ಯಾಲಯದ ಬದ್ಧತೆಯನ್ನು ಮತ್ತೊಮ್ಮೆ ಪ್ರತಿಪಾದಿಸಿತು.

