ಎರಡು ಕಾರ್ಗಳು ಮುಖಾಮುಖಿ ಡಿಕ್ಕಿ… ಓರ್ವ ಸಾವು, ಇಬ್ಬರಿಗೆ ಗಾಯ, ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಭೇಟಿ.

ಧಾರವಾಡ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಸಾವನಪ್ಪಿ ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯ ಧಾರವಾಡದ ಮಾಡರ್ನ್ ಹಾಲ್ ಬಳಿಯ ಬಿಆರ್ಟಿಎಸ್ ರಸ್ತೆಯಲ್ಲಿ ನಡೆದಿದೆ. ಧಾರವಾಡ ಕೆಲಗೇರಿ ನಿವಾಸಿಗಳಾದ ಶಿವಾನಂದ ಅಡಿವೆಪ್ಪ ಮಾಳಗಿ(38) ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಸಂಬಂಧಿ ಹಾಗೂ ಕಾರು ಚಾಲಕ ಮಂಜುನಾಥ ತಿಪ್ಪಣ್ಣ ಮಾಳಗಿ(28) ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಶಿವಾನಂದ ಹಾಗೂ ಮಂಜುನಾಥ ಹುಬ್ಬಳ್ಳಿಯಿಂದ ಧಾರವಾಡದತ್ತ ಕೆಎ-25 ಎಂಇ-0406 ಸ್ವಿಫ್ಟ್ ಕಾರಿನಲ್ಲಿ (ಬಿಆರ್ಟಿಎಸ್ ಕಾರಿಡಾರ್ನಲ್ಲಿ) ಪ್ರಯಾಣಿಸುತ್ತಿದ್ದರು. ಧಾರವಾಡದ ಮಾಡರ್ನ್ ಹಾಲ್ ಎದುರು ಬರುತ್ತಿದ್ದಂತೆ ಅದೇ ಸಮಯಕ್ಕೆ ಧಾರವಾಡಿದಿಂದ ಹುಬ್ಬಳ್ಳಿ ಮಾರ್ಗವಾಗಿ ಗದಗಕ್ಕೆ ಹೊರಟಿದ್ದ ಕೆಎ-26 ಎನ್-678 ಇನ್ನೋವಾ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಶಿವಾನಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಾರು ಚಾಲಕ ಮಂಜುನಾಥಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೋವಾ ಕಾರಿನಲ್ಲಿದ್ದ ಗದಗ ಮೂಲದ ಮನೀಶರೆಡ್ಡಿ ಬಸವರೆಡ್ಡಿ ಹುಚ್ಚಣ್ಣವರ ಹಾಗೂ ಮಂಜುನಾಥರೆಡ್ಡಿ ಸಾಸಿವೆಹಳ್ಳಿ ಎಂಬುವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನಾ ಸ್ಥಳಕ್ಕೆ ಧಾರವಾಡ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಅಪಘಾತಗೊಂಡ ಎರಡು ಕಾರುಗಳನ್ನು ಕ್ರೇನ್ ಸಹಾಯದಿಂದ ಸ್ಥಳಾಂತರಿಸುವ ಕಾರ್ಯ ನಡೆಸಿದರು. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
