ನಿನ್ನೆ ನಡೆದ ನೀಟ್ ಪರೀಕ್ಷೆಯಲ್ಲೂ ಯಡವಟ್ಟು.. ಜನಿವಾರ ತೆಗೆಸಿದ ಗೊಂದಲದಲ್ಲಿ ರಿಜಿಸ್ಟರ್ ನಂಬರ್ ತಪ್ಪಾಗಿ ಬರೆದೆ ವಿದ್ಯಾರ್ಥಿ

ಕಲಬುರಗಿ : ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ್ದ ಪ್ರಕರಣ ಮಾಸುವ ಮುನ್ನವೇ ನಿನ್ನೆ ನಡೆದ ನೀಟ್ ಪರೀಕ್ಷೆಯಲ್ಲೂ ಯಡವಟ್ಟು ಮಾಡಿದ್ದಾರೆ. ಕಲಬುರಗಿ ನಗರದ ಸೈಂಟ್ ಮೇರಿ ಶಾಲೆಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ಬೀದರ್ ಜಿಲ್ಲೆ ಬಸವಕಲ್ಯಾಣ ಮೂಲದ ಶ್ರೀಪಾದ್ ಪಾಟೀಲ್ ಎಂಬ ವಿದ್ಯಾರ್ಥಿಯ ಜನಿವಾರ ತೆಗೆಯಲು ಸಿಬ್ಬಂದಿ ಹೇಳಿದ್ದಾರೆ.. ಆದ್ರೆ ವಿದ್ಯಾರ್ಥಿಯ ತಂದೆ, ವರ್ಷದಿಂದ ಪರೀಕ್ಷೆಗೆ ತಯಾರಿ ನಡೆಸಿದ್ದೀಯ.. ಹೋಗಿ ಪರೀಕ್ಷೆ ಬರೀ ಎಂದ್ರಂತೆ.. ಬಳಿಕ ಆತ ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾನೆ.
ಪರೀಕ್ಷೆಗೆ ಹೋಗುವಾಗ ಜನಿವಾರ ತೆಗೆದಿಟ್ಟು ಬಾ ಎಂದಾಗ ನಾನು ಜನಿವಾರ ತೆಗೆದು ಅಪ್ಪನ ಕೈಗೆ ಕೊಟ್ಟುಬಂದೆ. ಇದರಿಂದ ನಾನು ಮಾನಸಿಕ ಗೊಂದಲಕ್ಕೆ ಒಳಗಾದೆ. ಓಎಂಆರ್ ಸೀಟ್ನಲ್ಲಿ ನೋಂದಣಿ ಸಂಖ್ಯೆಯೂ ತಪ್ಪಾಗಿ ಬರೆದಿದ್ದೇನೆ, ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಹೀಗಾಗಿ ನನಗೆ ಪುನಃ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ನೀಟ್ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಹೇಳಿದರು.
ವಿಷಯ ತಿಳೀತಿದ್ದಂತೆ ಬ್ರಾಹ್ಮಣ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.. ಇಂಥವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಬ್ರಾಹ್ಮಣ ಸಮುದಾಯ ಪ್ರತಿಭಟನೆ ಬಳಿಕ ಎಚ್ಚೆತ್ತ ಸರ್ಕಾರ ಇಬ್ಬರು ನೀಟ್ ಸಿಬ್ಬಂದಿ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಒಂದು ವಾರದ ಹಿಂದಷ್ಟೇ ರಾಜ್ಯ ಹೈಕೋರ್ಟ್ ಕೂಡ ಸರ್ಕಾರಕ್ಕೆ ಹಾಗೂ ಕೆಇಎಗೆ ನೋಟಿಸ್ ನೀಡಿತ್ತು. ಸಿಇಟಿ ಪರೀಕ್ಷೆಯಲ್ಲಿಯೂ ಇದೇ ರೀತಿ ಆಗಿದೆಯೆಂದು ದೂರುಗಳು ಬಂದಿದ್ದವು. ಈ ನಡುವೆ ಮತ್ತೆ ಜನಿವಾರ ಜ್ವಾಲೆ ಸ್ಫೋಟಿಸಿದೆ. ಇನ್ಮುಂದಾದ್ರೂ ಸರ್ಕಾರ ಕಟ್ಟುನಿಟ್ಟಿನ ಆದೇಶದ ಮೂಲಕ ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು..
