May 23, 2026

c24kannada

ವಸ್ತುಸ್ಥಿತಿಯತ್ತ

ಬೆಂಗಳೂರಿಗರೇ ಹುಷಾರ್‌ : ಬೇಸಿಗೆ ರಜೆ ಬಂತೆಂದು ಕುಟುಂಬ ಸಮೇತ ಊರು, ಪ್ರವಾಸ ಹೋಗುವ ಮುನ್ನ ಎಚ್ಚರಿಕೆ

 

ಬೆಂಗಳೂರು : ಬೇಸಗೆ ರಜೆಯ  ಸಂದರ್ಭದಲ್ಲಿ ಬೆಂಗಳೂರು ನಿವಾಸಿಗಳು ಮನೆಯ ಭದ್ರತೆ ಬಗ್ಗೆ ಸಾಕಷ್ಟು ಎಚ್ಚರದಿಂದ ಇರಬೇಕು ಎಂದು  ಪೊಲೀಸ್ ಆಯುಕ್ತ ಬಿ ದಯಾನಂದ್ ಸಲಹೆ ನೀಡಿದರು.  ಬೆಂಗಳೂರು ನಗರದಲ್ಲಿ ಇತ್ತೀಚೆಗೆ ನಡೆದ ಅಪರಾಧ ಕೃತ್ಯಗಳ ಮತ್ತು ಕಳ್ಳತನ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಅವರು, ಸಾರ್ವಜನಿಕರು ಏನೇನು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆಯನ್ನೂ ನೀಡಿದ್ದಾರೆ. ವಿಶೇಷವಾಗಿ, ಮನೆಗೆ ಬೀಗ ಹಾಕಿ ಊರಿಗೆ ಅಥವಾ ಪ್ರವಾಸಕ್ಕೆ ತೆರಳುವ ಮುನ್ನ ನಗರದ  ನಿವಾಸಿಗಳು  ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚನೆ ನೀಡಿದರು. ದೀರ್ಘ ಅವಧಿಗೆ ಪ್ರವಾಸ ತೆರಳುವ ಸಂದರ್ಭದಲ್ಲಿ ಮನೆಯಲ್ಲಿ ಬೆಳೆಬಾಳುವ ವಸ್ತುಗಳನ್ನು ಇಡಬೇಡಿ. ಅವುಗಳನ್ನು ಬ್ಯಾಂಕಿನಲ್ಲಿ ಅಥವಾ ಲಾಕರ್‌ಗಳಲ್ಲಿ ಇಡುವುದು ಸೂಕ್ತ ಎಂದು ಅವರ ಸಲಹೆ ನೀಡಿದರು.

 

ಕಷ್ಟಪಟ್ಟು ಸಂಪಾದಿಸಿದ ಹಣ, ಚಿನ್ನವನ್ನು ಒಂದು ಸಣ್ಣ ಅಜಾಗರೂಕತೆಯಿಂದ ಕಳೆದುಕೊಳ್ಳಬೇಡಿ. ಕಳ್ಳರು ಕೇವಲ ಹೊರಗಿನಿಂದ ಬರುವವರಷ್ಟೇ ಅಲ್ಲ, ಮನೆಯಲ್ಲಿಯೂ ಇರಬಹುದು. ಹೀಗಾಗಿ ಮನೆ ಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಅವರ ಪೂರ್ವಾಪರವನ್ನು ಸರಿಯಾಗಿ ತಿಳಿದುಕೊಳ್ಳಿ. ಮನೆಯಲ್ಲಿ ಎಲ್ಲಿಂದರಲ್ಲಿ ಕೆಲಸದವರನ್ನು ಓಡಾಡಲು ಬಿಡಬೇಡಿ. ಬೆಲೆಬಾಳುವ ವಸ್ತುಗಳನ್ನು ಅವರಿಗೆ ಕಾಣುವಂತೆ ಇಡುವುದು, ಪ್ರದರ್ಶಿಸುವುದು ಮಾಡಬೇಡಿ ಎಂದು ಪೊಲೀಸ್ ಆಯುಕ್ತರು ಸಲಹೆಗಳನ್ನು ನೀಡಿದರು.

 

ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಿ, ಮನೆಗೆ ಗುಣಮಟ್ಟದ ಬೀಗ ಅಳವಡಿಸಬೇಕು.  ಬೀಗದ ಕೀಯನ್ನು ಮನೆ ಪಕ್ಕದಲ್ಲಿ ಎಲ್ಲೋ ಇಟ್ಟು ಹೋಗುವ ಅಭ್ಯಾಸ ಮಾಡಬೇಡಿ. ಒಂದಕ್ಕಿಂತ ಹೆಚ್ಚು ದಿನ ಪ್ರವಾಸ ಹೋಗುವುದಿದ್ದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ತೆರಳುವುದು ಒಳ್ಳೆಯದು ಇಂಥ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಗಸ್ತು ನಡೆಸುವುದು ಪೊಲೀಸರಿಗೂ ಸುಲಭವಾಗುತ್ತದೆ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನೇಪಾಳಿ ಗ್ಯಾಂಗನ್ನು ಬಂಧಿಸಿದ್ದರು. ಈ ಗ್ಯಾಂಗ್ ಮನೆಗೆ ನುಗ್ಗಿ ಚಿನ್ನ, ಬೆಳ್ಳಿ ಹಾಗೂ ಇತರ ಆಭರಣ ವಸ್ತುಗಳನ್ನು ಕಳವು ಮಾಡುತ್ತಿತ್ತು. ಇದೀಗ ಬೇಸಿಗೆ ರಜೆ ಸಂದರ್ಭದಲ್ಲಿ ಇಂತಹ ಗ್ಯಾಂಗ್​​ಗಳು ಇನ್ನಷ್ಟು ಸಕ್ರಿಯವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.

Leave a Reply

Your email address will not be published. Required fields are marked *

error: Content is protected !!