ಪತ್ನಿ ಶೀಲ ಶಂಕೆ: ನಡುರಸ್ತೆಯಲ್ಲಿ ಚಾಕು ಇರಿತ ಯತ್ನ, ಸಾರ್ವಜನಿಕರಿಂದ ಪತಿಗೆ ಗೂಸ. ಪತ್ನಿ ರಕ್ಷಿಸಿದ ಸ್ಥಳೀಯರು
ನಡು ರಸ್ತೆಯಲ್ಲಿಯೇ ಹೆಂಡತಿಯ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಪತಿಗೆ ಗೂಸ,
ಬೆಂಗಳೂರು: ಪತ್ನಿಯ ನಡತೆಯ ಮೇಲೆ ಶಂಕೆ ನಡು ರಸ್ತೆಯಲ್ಲಿ ಆಕೆಯ ಕೊಲೆಗೆ ಯತ್ನಿಸಿದ ಪತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರಿನ ಮಾದನಾಯಕನ ಹಳ್ಳಿಯ ದಾಸನಪುರದಲ್ಲಿ ನಡೆದಿದೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂತರ ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ಮೂಲತಃ ಬಿಹಾರದ ದಂಪತಿಗಳಾದ ಸೋನಾಲಿ ಮತ್ತು ಸಂಜಯ್ ಅವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು ಎನ್ನಲಾಗಿದೆ. ಸಂಜಯ್ ಸದಾ ಮದ್ಯಪಾನ ಮಾಡಿ ಸೋನಾಲಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎಂದು ಆರೋಪವಿದೆ.
ಪತಿಯ ಕಿರುಕುಳ ತಾಳಲಾರದೆ ಸೋನಾಲಿ ಅವರು ಬೇರೆಯಾಗಿ ವಾಸಿಸುವ ನಿರ್ಧಾರ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಸಂಜಯ್, ತನ್ನ ಬೈಕ್‌ನಲ್ಲಿ ಬಂದು ರಸ್ತೆಯಲ್ಲೇ ಸೋನಾಲಿ ಜೊತೆ ಜಗಳವಾಡಿದ್ದಾನೆ. ವಾಗ್ವಾದ ತಾರಕಕ್ಕೇರಿದಾಗ ತನ್ನ ಬಳಿಯಿದ್ದ ಚಾಕು ತೆಗೆದು ಸೋನಾಲಿ ಕುತ್ತಿಗೆ ಹಿಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣವೇ ಧಾವಿಸಿ ಬಂದು ಸಂಜಯ್‌ನನ್ನು ತಡೆದಿದ್ದಾರೆ. ಚಾಕು ಕಸಿದುಕೊಂಡು ಮಹಿಳೆಯ ಪ್ರಾಣ ಕಾಪಾಡಿದ್ದಾರೆ, ಬಳಿಕ ಆತನನ್ನು ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಕುರಿತು ಸ್ಥಳಕ್ಕೆ ಮಾದನಾಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (NCR) ದಾಖಲಾಗಿದ್ದು, ಪೊಲೀಸರು ದಂಪತಿಗಳಿಗೆ ಕೌನ್ಸೆಲಿಂಗ್ ನಡೆಸಿ ಕಳುಹಿಸಿಕೊಟ್ಟಿದ್ದಾರೆ.
