ರಾತ್ರಿ 9.30ರ ಒಳಗೆ ಅಂಗಡಿ, ಹೋಟೆಲ್, ಬಾರ್ ಎಲ್ಲವೂ ಬಂದ್
1 min read
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಪ್ರತೀಕಾರದ ಹತ್ಯೆ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ಗಳನ್ನು ಪ್ರಕಟಿಸಿರುವ ಕಾರಣ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ‘ರಾತ್ರಿ 9.30ಕ್ಕೆ ಭರತ್ ಕುಮ್ಡೇಲ್ ಕೊಲ್ಲುತ್ತೇವೆ’ ಎಂದು ಸಂದೇಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ನಿನ್ನೆ ರಾತ್ರಿ ಇಂದ 9.30ರೊಳಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ. ಹೋಟೆಲ್, ಪಬ್, ಬಾರ್ಗಳು, ಫುಟ್ಪಾತ್ ವ್ಯಾಪಾರವನ್ನು ರಾತ್ರಿ 9.30 ರ ಒಳಗೆ ಬಂದ್ ಮಾಡಿಸಲಾಗುತ್ತಿದೆ. ಜನರನ್ನು ಬೇಗನೆ ಮನೆ ಸೇರಿಸುವ ಯತ್ನದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದನ್ನೇ ಮುಂದುವರಿಸುವ ಸಾಧ್ಯತೆ ಇದೆ .
ಸುಹಾಸ್ ಶೆಟ್ಟಿ ಕೊಲೆ ನಂತರ ಮಂಗಳೂರಿನ ಮೂರು ಕಡೆ ಚಾಕು ಇರಿತ ಪ್ರಕರಣಗಳು ವರದಿಯಾಗಿದೆ. ಒಟ್ಟಾರೆಯಾಗಿ 7 ಜನರನ್ನು ಬಂಧಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಮಂಗಳೂರಿನಲ್ಲಿ ಮತ್ತಿಬ್ಬರು ಹಿಂದೂ ಮುಖಂಡರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆ ಹಾಕಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮತ್ತು ಭರತ್ ಕುಮ್ಡೇಲ್ ಅವರನ್ನು ಹತ್ಯೆ ಮಾಡುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವೈರಲ್ ಮಅಡಲಾಗಿತ್ತು. ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಕೊಲ್ಲುತ್ತೇವೆ” ಎಂದು ಭರತ್ ಕುಮ್ಡೇಲ್ ಹೆಸರು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದರು. ಹೀಗಾಗಿ, ನಿನ್ನೆಯಿಂದಲೇ ಮಂಗಳೂರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ಫುಟ್ಪಾತ್ ವ್ಯಾಪಾರಿಗಳನ್ನು ರಾತ್ರಿ 9:30ರ ಒಳಗೆ ತೆರವುಗೊಳಿಸುವ ಪ್ರಕ್ರಿಯೆ ಶುರುವಾಗಿತ್ತು.
