ಜನರ ಸಮಸ್ಯೆಗಳನ್ನು ಈಡೇರಿಸುವುದೇ ಜನಸ್ಪಂದನಾ ಕಾರ್ಯಕ್ರಮ ಉದ್ದೇಶ: ಶಾಸಕ ಸುಬ್ಬಾರೆಡ್ಡಿ
1 min read
ಗುಡಿಬಂಡೆ: ಜನರು ಸರ್ಕಾರಿ ಕಚೇರಿಗಳಿಗೆ ಅಲೇದಾಡದೇ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಈಡೇರಿಸುವ ಉದ್ದೇಶದಿಂದಲೇ ಸರ್ಕಾರ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು, ಅವುಗಳನ್ನು ಪಡೆದುಕೊಳ್ಳಲು ಜನರಿಗೆ ಸಮಸ್ಯೆಯಾಗುತ್ತಿದೆ, ಜೊತೆಗೆ ಸರ್ಕಾರಿ ಇಲಾಖೆಗಳಲ್ಲಿ ಜನರಿಗೆ ಅನೇಕ ಕೆಲಸಗಳಾಗಬೇಕಿರುತ್ತದೆ. ತಮ್ಮ ಊರುಗಳಿಂದ ಕಚೇರಿಗಳಿಗೆ ಅಲೆದಾಡುತ್ತಿರುತ್ತಾರೆ. ಅಧಿಕಾರಿಗಳಿಗೆ ಸಭೆ ಸಮಾರಂಭಗಳ ಕಾರಣದಿಂದ ಜನರ ಕೈಗೆ ಅವರು ಸಿಗುವುದಿಲ್ಲ. ಆದ್ದರಿಂದ ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಈ ಕಾರ್ಯಕ್ರಮದ ಮೂಲಕ ಜನರಿಗೆ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲಾಗುತ್ತದೆ. ಜನರು ಸಲ್ಲಿಸುವ ಬಹುತೇಕ ಅಹವಾಲುಗಳನ್ನು ಸಭೆಯಲ್ಲಿ ಇತ್ಯರ್ಥ ಮಾಡಲಾಗುತ್ತದೆ. ಆದ್ದರಿಂದ ಜನರು ಇಂತಹ ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಆ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.
ಇನ್ನೂ ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಚುನಾವಣೆಯ ಸಮಯದಲ್ಲಿ ನೀಡಿದಂತಹ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ನೀಡುವ ಕಾರಣದಿಂದ ಕೊಂಚ ಅಭಿವೃದ್ದಿ ಕಾರ್ಯಕ್ರಮಗಳಿಗೆ ಅನುದಾನ ಕೊರತೆಯಾಗುತ್ತಿದೆ. ಆದರೂ ಸಹ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉಲ್ಲೋಡು ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಉಲ್ಲೋಡು ಗ್ರಾ.ಪಂ ವ್ಯಾಪ್ತಿಯ ಮೂರು ಗ್ರಾಮಗಳನ್ನು ಹೊರತುಪಡಿಸಿ ಎಲ್ಲಾ ಗ್ರಾಮಗಳಲ್ಲೂ ಶುದ್ದ ಕುಡಿಯುವ ನೀರಿನ ಘಟಕ ಇದೆ. ಜೂನ್ 30ರೊಳಗೆ ಉಳಿದ ಮೂರು ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುತ್ತೇನೆ ಎಂದರು.
ಜನಸ್ಪಂದನಾ ಕಾರ್ಯಕ್ರಮಕ್ಕೂ ಮುನ್ನಾ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿನ ನೂತನ ಪಶು ವೈದ್ಯಕೀಯ ಇಲಾಖೆಯ ಕಟ್ಟಡದ ಉದ್ಘಾಟನೆ, ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೂರು ಕೊಠಡಿಗಳ ಉದ್ಘಾಟನೆ, 5 ಕೋಟಿ ವೆಚ್ಚದ ಗುಡಿಬಂಡೆ ಪಟ್ಟಣದಿಂದ ರಾಮಪಟ್ಟಣ ರಸ್ತೆ ಕಾಮಗಾರಿಯ ಭೂಮಿ ಪೂಜೆ, ಜನಸ್ಪಂದನಾ ಕಾರ್ಯಕ್ರಮದಲ್ಲಿ ಹಾಕಿದ್ದ ವಿವಿಧ ಇಲಾಖೆಗಳ ಮಾಹಿತಿ ಮಳಿಗೆಗಳನ್ನು ಶಾಸಕರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಸಭೆಯಲ್ಲಿದ್ದ ಗಣ್ಯರು ನೆರವೇರಿಸಿದರು. ಬಳಿಕ ವಿವಿಧ ಮಶಾಸನಗಳ ಮಂಜೂರಾತಿ ಪತ್ರ, ಭಾಗ್ಯ ಲಕ್ಷ್ಮೀ ಬಾಂಡ್ ವಿತರಣೆ, ಜಾಬ್ ಕಾರ್ಡ್ ವಿತರಣೆ, ಎನ್.ಎಲ್.ಎಂ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ತಮ್ಮ ಇಲಾಖೆಗಳಲ್ಲಿ ಸಿಗುವಂತಹ ಸೌಲಭ್ಯಗಳ ಮಾಹಿತಿಯನ್ನು ನೀಡಿದರು. ಈ ಸಮಯದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ವ್ಯಾಪ್ತಿಯ ಮುಖಂಡರುಗಳು ಸೇರಿದಂತೆ ಹಲವರು ಇದ್ದರು.
ವರದಿ : ಸತೀಶ್ ಬಾಬು
