ಮನೆಕೆಲಸದ ಹೆಣ್ಣುಮಗಳೊಬ್ಬಳು ಇಂದು ಅಂತರಾಷ್ಟ್ರೀಯ ಖ್ಯಾತಿಯ ಲೇಖಕಿ
1 min read

ಹೈಸ್ಕೂಲ್ ಮೆಟ್ಟಿಲನ್ನೂ ಹತ್ತದ ಮನೆಕೆಲಸದ ಹೆಣ್ಣುಮಗಳೊಬ್ಬಳು ಇಂದು ಅಂತರಾಷ್ಟ್ರೀಯ ಖ್ಯಾತಿಯ ಲೇಖಕಿ. ಈಕೆ ಬರೆದ ಪುಸ್ತಕಗಳು ಇಂಗ್ಲಿಷ್, ಜರ್ಮನ್, ಸ್ಪಾನಿಷ್ ಸೇರಿದಂತೆ ಇಪ್ಪತ್ನಾಲ್ಕು ಭಾಷೆಗಳಿಗೆ ಅನುವಾದಗೊಂಡಿವೆ. ಈಕೆಯ ಹೆಸರು ಬೇಬಿ ಹಾಲ್ದೆರ್. 1973 ರಲ್ಲಿ ಕಾಶ್ಮೀರದ ಕಡುಬಡತನದ ಕುಟುಂಬವೊಂದರಲ್ಲಿ ಜನಿಸಿದಳು. ಈಕೆಯ ತಂದೆ ವಿಪರೀತ ಕುಡುಕ. ಇವನ ಕಿರುಕುಳ ತಾಳಲಾರದೆ ಹಾಲ್ದೆರ್ ಳ ತಾಯಿ ಮನೆಬಿಟ್ಟು ಹೊರಟುಹೋದಳು. ಅವಳನ್ನು ಹುಡುಕುವ ಗೋಜಿಗೂ ಹೋಗದ ತಂದೆ ಒಂದೇ ವಾರದಲ್ಲಿ ಎರಡನೆ ಮದುವೆಯಾದ. ಮಲತಾಯಿಗೆ ಹಾಲ್ದೆರ್ ಹಾಗೂ ಅವಳ ಅಕ್ಕ ಸುಶೀಲಳು ಭಾರವೆನಿಸಿದರು. ಇವಳ ಕುಮ್ಮಕ್ಕಿನಿಂದ ತಂದೆ ಸುಶೀಲಾಳನ್ನು ಹದಿನಾಲ್ಕನೆ ವಯಸ್ಸಿಗೆ ಮದುವೆಮಾಡಿ ಕೈ ತೊಳೆದುಕೊಂಡ.
ನಂತರದಲ್ಲಿ ಬೇಬಿ ಹಾಲ್ದೆರ್ ಳಿಗೂ ಅವಳ ಹನ್ನೆರಡನೆ ವಯಸ್ಸಿನಲ್ಲಿ ಅವಳ ವಯಸ್ಸಿಗಿಂತ ಎರಡೂವರೆಪಟ್ಟು ಹೆಚ್ಚು ವಯಸ್ಸಾದ ಗಂಡಿನ ಜೊತೆಗೆ ಮದುವೆ ಮಾಡಿ ಸಾಗಹಾಕಲಾಯಿತು.
ದಾಂಪತ್ಯ ಎಂದರೇನೆಂದು ತಿಳಿಯದ ಬಾಲೆ ತನ್ನ ಹದಿಮೂರನೆ ವಯಸ್ಸಿಗೆ ತಾಯಿಯಾಗಿಬಿಟ್ಟಳು. ಹದಿನೈದನೆ ವಯಸ್ಸಿಗೆ ಬರುವಷ್ಟರಲ್ಲಿ ಈಕೆಯ ಮಡಿಲಿಗೆ ಇನ್ನೂ ಎರಡು ಮಕ್ಕಳನ್ನು ದಯಪಾಲಿಸಿದ ಇವಳ ಗಂಡ. ಇವನು ವಿಪರೀತ ಕುಡಿಯುವುದು, ಹೆಂಡತಿ ಮಕ್ಕಳನ್ನು ಹಿಡಿದು ಬಡಿಯುವುದು ಬಿಟ್ಟರೆ ಬೇರೆ ಕೆಲಸಕಾರ್ಯಗಳನ್ನು ಮಾಡುತ್ತಿರಲಿಲ್ಲ. ನೊಂದು ಬೆಂದು ತವರಿಗೆ ಹೋದರೆ ಮಲತಾಯಿ ಒದ್ದು ಹೊರಹಾಕುತ್ತಿದ್ದಳು.
ಇಂತಹ ಕಷ್ಟದ ಬದುಕಿನಲ್ಲಿಯೇ ಕಾಲಕಳೆದ ಇವಳ ಅಕ್ಕನನ್ನು ಅಕ್ಕನ ಗಂಡನೆ ಕುಡಿದು ಬಡಿದು ಕೊಂದೇಹಾಕಿದ್ದ. ಎಲ್ಲಿಯೂ ನೆಲೆಸಿಗದಂತಾದ ಬೇಬಿ ಬೇರೆಯವರ ಮನೆಯ ಕಸಮುಸುರೆ ಮಾಡಿ ಮಕ್ಕಳನ್ನು ಸಾಕುತ್ತಾ ಜೀವ ಸಾಗಿಸತೊಡಗಿದಳು. ಅದೂ ನೆಮ್ಮದಿಯಿಲ್ಲದಂತಾಗಲು ಕುಡುಕ ಗಂಡನ ಹಿಂಸೆಗೆ ರೋಸಿಹೋಗಿ ಎಳೆಯಮಕ್ಕಳನ್ನು ಕಟ್ಟಿಕೊಂಡು ದೆಹಲಿಯ ರೈಲು ಹತ್ತಿಬಿಟ್ಟಳು. ಆರಂಭದ ಕೆಲದಿನಗಳು ರೈಲ್ವೆ ನಿಲ್ದಾಣದಲ್ಲಿ ಮಕ್ಕಳ ಸಮೇತ ಬಿಕ್ಷೆಬೇಡಿ ಜೀವನ ಸಾಗಿಸತೊಡಗಿದಳು. ಆದರೆ ಪ್ರಾಯದ ಒಂಟಿಹೆಂಗಸು ಬಸ್ಟ್ಯಾಂಡಿನಲ್ಲಿ ಕಾಲಕಳೆಯುವುದು ಕಷ್ಟವಾಗತೊಡಗಿತು. ಕುಡುಕರು, ಬಿಕ್ಷುಕರು ಕಿರುಕುಳ ಕೊಡಲಾರಂಭಿಸಿದರು. ಬಸ್ಟ್ಯಾಂಡ್ ತೊರೆದು ದೆಹಲಿಯ ಮುಖ್ಯ ಏರಿಯಾ ಗುರಗಾಂವ್ ಗೆ ಹೋದಳು. ಅಲ್ಲಿ ಕಲ್ಕತ್ತಾದಿಂದ ವಲಸೆಬಂದ ಶ್ರೀಮಂತರು ಹೆಚ್ಚಿಸಂಖ್ಯೆಯಲ್ಲಿದ್ದರು. ಅಲ್ಲಿನ ಕೆಲವು ಮನೆಗಳಲ್ಲಿ ಹೇಗೋ ಕಷ್ಟಪಟ್ಟು ಮುಸುರೆ ಕೆಲಸ ಸಂಪಾದಿಸಿ ಜೀವನ ಸಾಗಿಸತೊಡಗಿದಳು. ಆ ದಿನಗಳಲ್ಲಿ ಶ್ರೀಮಂತರ ಮನೆಗಳಲ್ಲಿ ಬೇಕಾಬಿಟ್ಟಿ ಬಿದ್ದಿರುತ್ತಿದ್ದ ಹಣ್ಣುಹಂಪಲು, ಬಿಸ್ಟೆಟ್ಗಳನ್ನು ಆಸೆಕಣ್ಣುಗಳಿಂದ ನೋಡುತ್ತಿದ್ದ ಮಕ್ಕಳ ಬಗ್ಗೆ ಬರೆಯುತ್ತಾಳೆ. ಕಟು ಮನಸ್ಸಿನ ಜನ ಕೈನೀಡಿ ಕೊಡುವುದು ಇರಲಿ, “ನಿನ್ನ ಭಿಕಾರಿ ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿಬಾ..” ಎಂದವರ ಮಾತುಗಳನ್ನು ನೆನೆಪು ಮಾಡಿಕೊಂಡು ಕಣ್ಣೀರು ತಂದುಕೊಳ್ಳುತ್ತಾಳೆ. ಇಷ್ಟಾಗಿಯೂ ಬೇಬಿಗೆ ಚಿಕ್ಕಂದಿನಿಂದಲೂ ಪುಸ್ತಕ ಓದುವ ಹುಚ್ಚು ಹತ್ತಿತ್ತು. ಉಳ್ಳವರ ಮನೆಗಳಲ್ಲಿ ಕಸಗುಡಿಸುವಾಗ, ಒಪ್ಪ ಓರಣಗೊಳಿಸುವಾಗ ಕೈಗೆಸಿಕ್ಕ ಪುಸ್ತಕ ಓದುತ್ತಾ ಮೈ ಮರೆತುಬಿಡುತ್ತಿದ್ದಳು.
ಇಂತಹ ಕಡುಕಷ್ಟದ ದಿನಗಳಲ್ಲಿಬೆಳಕಿನ ಚುಕ್ಕೆಯೊಂದು ಆಕೆಯ ಬದುಕಿನೊಳಗೆ ಪ್ರವೇಶಮಾಡಿತ್ತು. ಅವರ ಹೆಸರು ಪ್ರಬೋಧ್ ಕುಮಾರ್. ನಿವೃತ್ತ ಪ್ರೊಫೆಸರ್. ಶ್ರೇಷ್ಠ ಕಥೆಗಾರ ಮುನ್ಶಿ ಪ್ರೇಮಚಂದ್ ರ ಮೊಮ್ಮಗ ಈತ. ಇವರ ಮನೆಯ ಕೆಲಸ ಸಿಕ್ಕನಂತರ ಬೇಬಿಯ ಬದುಕು ಸಿನಿಮೀಯ ರೀತಿಯಲ್ಲಿ ಬದಲಾಯಿತು. ಪ್ರಬೋಧ್ ಕುಮಾರ್ ರು ಈಕೆಗೆ ಶ್ರೇಷ್ಠ ಬಂಗಾಲಿ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ಆ ವೇಳೆಗಾಗಲೇ ಈಕೆ ಶಾಲೆಬಿಟ್ಟು ಇಪ್ಪತ್ತು ವರ್ಷಗಳೇ ಕಳೆದಿದ್ದವು. ಆದರೂ ಪ್ರೊಫೆಸರ್ ಅವರ ಪ್ರೋತ್ಸಾಹ ದಿಂದ ತನ್ನದೇ ಕಥೆಯೊಂದನ್ನು ಬರೆದುಮುಗಿಸಿದಳು. ಅದನ್ನು ಅಲ್ಲಲ್ಲಿ ತಿದ್ದಿ, ವ್ಯಾಕರಣ ಸರಿಪಡಿಸಿ ಪ್ರಬೋಧ್ ಕುಮಾರ್ ಅವರು ಇವಳ ಪುಸ್ತಕ ಪ್ರಕಟಿಸಲು ನೆರವಾದರು.
೨೦೨೪ ರಲ್ಲಿ ಪ್ರಕಟವಾದ Aalo Aandhari ಎಂಬ ಆ ಪುಸ್ತಕ ವರ್ಷದ ಬೆಸ್ಟ್ ಸೆಲ್ಲರ್ ಪಟ್ಟಿಗೆ ಸೇರಿತು. ಕೆಲವೇ ವರ್ಷಗಳಲ್ಲಿ ಹಲವಾರು ಭಾಷೆಗೆ ಅನುವಾದಗೊಂಡಿತು. ನಂತರ ನಡೆದದ್ದು ಇತಿಹಾಸ. ಬೆಬಿ ಹಾಲ್ದಾರ್ ಳಿಗೆ ಜರ್ಮನಿ, ಫ್ರಾನ್ಸ್, ಸ್ಪೇನ್, ನ್ಯೂಯಾರ್ಕ್ ಗೆ ಹೋಗುವ ಅಲ್ಲಿನ ಸಾಹಿತ್ಯಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಇಂದಿಗೂ ತಂದೆಯಂತಿರುವ ಪ್ರೊಫೆಸರ್ ಅವರ ಮನೆಕೆಲಸ ಮಾಡುತ್ತಾಳೆ ಈಕೆ. ಕಷ್ಟಪಟ್ಟು ಮಕ್ಕಳನ್ನು ದಡಹತ್ತಿಸಿದ್ದಾಳೆ. ಪವಾಡ ಏನೂ ಇಲ್ಲ. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ನಿರೂಪಿಸಿದ್ದಾಳೆ.
