ಹಿರೋಯಿನ್ ಗಳ ಹೆಸರನ್ನು ಬಿಡದ ಸೈಬರ್ ಚೋರರು.. ಸ್ಯಾಂಡಲ್ವುಡ್ನ ಖ್ಯಾತ ನಟಿ ಹೆಸರಲ್ಲಿ ಹಣಕ್ಕೆ ಬೇಡಿಕೆ
1 min read
ಬೆಂಗಳೂರು: ದಿನ ಕಳೆದಂತೆ ತಂತ್ರಜ್ಞಾನ ಹೆಚ್ಚಾಗುತ್ತಲೇ ಇದೆ. ಇದರ ಜೊತೆ ಸೈಬರ್ ವಂಚನೆಯು ಹೆಗ್ಗಿಲ್ಲದೇ ನಡೆಯುತ್ತಿದ್ದು ಸಾರ್ವಜನಿಕರು ಆನ್ಲೈನ್ ಬ್ಯಾಂಕಿಂಗ್ ಬಗ್ಗೆ ಜಾಗೃತರಾಗಿರಬೇಕು. ಏಕೆಂದರೆ ಸೈಬರ್ ಖದೀಮರು ಯಾವ ಮೂಲದಿಂದ ಹಣ ದೋಚುತ್ತಾರೆ ಎನ್ನುವುದೇ ಗೊತ್ತಿಲ್ಲ. ಇಷ್ಟು ದಿನ ಬ್ಯಾಂಕ್ ಹೆಸರಲ್ಲಿ ಹಣ ದೋಚುತ್ತಿದ್ದ ಖದೀಮರು ಇದೀಗ ಹಿರೋಯಿನ್ ಹೆಸರಲ್ಲೂ ವಂಚನೆಗೆ ಮುಂದಾಗಿದ್ದಾರೆ. ಸ್ಯಾಂಡಲ್ವುಡ್ನ ನಟಿ ಶರಣ್ಯ ಶೆಟ್ಟಿಯ ಹೆಸರು ಹಾಗೂ ಫೋಟೋವನ್ನು ವಂಚನೆಗೆ ಬಳಕೆ ಮಾಡಲಾಗಿದೆ. ನಕಲಿ ನಂಬರ್ ತೆಗೆದುಕೊಂಡಿರುವ ಚೋರರು, ಅದಕ್ಕೆ ನಟಿಯ ಫೋಟೋ ಅಂಟಿಸಿದ್ದಾರೆ. ಅಲ್ಲದೇ ಡಿಪಿಗೆ ಕೂಡ ಶರಣ್ಯ ಶೆಟ್ಟಿಯ ಫೋಟೋ ಅಪ್ಲೋಡ್ ಮಾಡಿದ್ದು ಜನರಿಗೆ ನಂಬಿಕೆ ಬರುವಂತೆ ಮಾಡಿದ್ದಾರೆ.
ಶರಣ್ಯ ಶೆಟ್ಟಿಯ ಫೋಟೋ ಡಿಪಿ ಹಾಕಿಕೊಂಡ ಖದೀಮರು, ಸ್ವಲ್ಪ ಹಣದ ಅವಶ್ಯಕತೆ ಇತ್ತು. ಹೀಗಾಗಿ ಹಣ ಇದ್ದರೆ ಕಳಿಸಿ ಪ್ಲೀಜ್.. ಎಂದು ಫೇಕ್ ಮೆಸೇಜ್ ಮಾಡಿದ್ದಾರೆ. ಬೇರೆ ನಕಲಿ ನಂಬರ್ ಪಡೆದು ಅದಕ್ಕೆ ನಟಿಯ ಹೆಸರು ಬರುವಂತೆ ವಂಚಕರು ಮಾಡಿದ್ದಾರೆ. ಹೀಗಾಗಿ ಇದನ್ನೂ ನೋಡಿದವರಿಗೆ ಅದು ಶರಣ್ಯ ಅವರದ್ದೇ ನಂಬರ್ ಎನ್ನುವಂತೆ ಮಾಡಿದ್ದಾರೆ.
ಮೆಸೇಜ್ ಮಾಡಿರುವ ವಂಚಕರು ನನಗೆ ಇಂತಿಷ್ಟು ಹಣ ಬೇಕು ಎಂದು ಕೇಳಿದ್ದಾರೆ. ಈ ಕುರಿತು ಶರಣ್ಯ ಶೆಟ್ಟಿಯವರು ತಮ್ಮ ಅಧಿಕೃತ ಇನ್ಸ್ಟಾದ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಹೆಸರಲ್ಲಿ ಅಪರಿಚಿತರು ವಂಚನೆಗೆ ಇಳಿದಿದ್ದಾರೆ. ಯಾರೂ ಕೂಡ ಇದನ್ನು ನಂಬಿ ಹಣ ಕಳಿಸಬೇಡಿ. ವಂಚನೆಗೆ ಮುಂದಾಗಿರುವ ಖದೀಮರ ವಿರುದ್ಧ ಸೈಬರ್ ಕ್ರೈಂ ಇಲಾಖೆಗೆ ದೂರು ನೀಡುತ್ತೇನೆ ಎಂದು ಶರಣ್ಯ ಶೆಟ್ಟಿ ಅವರು ಹೇಳಿದ್ದಾರೆ.
