ಮಗನಿಗಾಗಿ ಸಾಲ ಮಾಡಿ ಬೀದಿ ಪಾಲಾದ ತಂದೆ-ತಾಯಿ..ಉದ್ಯೋಗಕ್ಕೆ ಹಣ ಸಿಗ್ತಿದ್ದಂತೆ ಅಪ್ಪ-ಅಮ್ಮನ ಬೀದಿಯಲ್ಲಿ ಬಿಟ್ಟ ಸುಪುತ್ರ!
1 min read
ವಿಜಯಪುರ : ಮಕ್ಕಳನ್ನು ಹೆತ್ತಿದ್ದೇವೆ .. ಈಗ ಮಕ್ಕಳೇ ಇಲ್ಲ ನೋಡ್ರಿ.. ನಾಲ್ಕು ದಿನ ಆಯ್ತು ಹೊರಗೆ ಬಿದಿದ್ದಿವಿ, .. ನಾವು ರೋಡ್ ಮ್ಯಾಲೇ ಕುಳಿತುಕೊಂಡಿದ್ದಿವಿ. ಎಲ್ಲಿ ಹೋಗೋಣ. ಏನ್ ಮಾಡೋಣ. ನಮ್ದು ಸಾಯೋ ಕಾಲ. ಮನೆಗೆ ಬಿದ್ದು ಸಾಯ್ತೇವ್ರಿ. ಬಾಜಿ ಮನೆಯವರು ದಿನಾ ರೊಟ್ಟಿ ಕೊಡುತ್ತಾರೆ.. ಮಗ ಚೆನ್ನಾಗಿರ್ಲಿ ಅಂತಾ ಸಾಲ ಮಾಡಿ ಕೊಟ್ಟಿದಕ್ಕೆ ನಮಗೆ ಈ ಸ್ಥಿತಿ ತಂದಿದಾನೆ. ’ ಎನ್ನುತ್ತ ವಿಜಯಪುರದಲ್ಲಿ ಬೀದಿ ಬೀದಿ ಅಲೆಯುತ್ತ ವೃದ್ಧ ದಂಪತಿ ಕಣ್ಣೀರು ಹಾಕ್ತಿದ್ದಾರೆ.
ಕಣ್ಣೀರಿಗೆ ಕಾರಣ ಮಗ ಚೆನ್ನಾಗಿರಲಿ ಅಂತಾ ಮಾಡಿದ ಸಾಲ
ಹೌದು, ವಿಜಯಪುರ ಆಲಕುಂಟೆ ನಗರದಲ್ಲಿ ಈ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ವೀರಭದ್ರ, ಬಾಗಮ್ಮ ಹಡಪದ ದಂಪತಿ ಮಗನಿಗೋಸ್ಕರ ಐದು ವರ್ಷದ ಹಿಂದೆ ಐದು ಲಕ್ಷ ಸಾಲ ಮಾಡಿ ಇದೀಗ ಬೀದಿ ಪಾಲಾಗಿದ್ದಾರೆ. ಹಿರಿಯ ಮಗ ಬಸವರಾಜ್ ಹಡಪದ ಉದ್ಯೋಗಕ್ಕಾಗಿ ದಂಪತಿ ಸಾಲ ಮಾಡಿ ಕೊಟ್ಟಿದ್ದರು. ಸಾಲ ತೀರಿಸಬೇಕಿದ್ದ ಮಗ ಬಸವರಾಜ್, ತಲೆ ಕೆಡಿಸಿಕೊಳ್ತಿಲ್ಲ. ಬೇರೆ ಮನೆ ಮಾಡಿಕೊಂಡು ಹೆಂಡತಿ, ಮಕ್ಕಳ ಜೊತೆ ಆರಾಮಾಗಿದ್ದಾನೆ.
ಹೆತ್ತವರ ಸಂಕಟ ಏನು..?
5 ವರ್ಷಗಳ ಹಿಂದೆ ಮಾಡಿದ್ದ ಸಾಲಕ್ಕೆ ಪ್ರತಿ ತಿಂಗಳು 14 ಸಾವಿರ ರೂಪಾಯಿ ಕಟ್ಟಬೇಕಿತ್ತು. ‘ಜನ ಸ್ಮಾಲ್ ಫೈನಾನ್ಸ್’ಗೆ ಹಣ ನೀಡಬೇಕಿತ್ತು. ಆದರೆ ಹಿರಿಯ ಮಗ ಸರಿಯಾಗಿ ಸಾಲ ತುಂಬಲಿಲ್ಲ. ಫೈನಾನ್ಸ್ ಸಿಬ್ಬಂದಿ ವೃದ್ಧ ದಂಪತಿ ಬಳಿ ಹಣ ಪಾವತಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದವರೆಗೆ ಸಾಲ ತುಂಬುತ್ತ ಬಂದಿದ್ದರು. ವರ್ಷದ ಈಚೆಗೆ ದುಡಿಯಲು ಸಾಧ್ಯವಾಗದ ಕಾರಣ ಬಾಕಿ ಹಣ ತುಂಬೋದನ್ನು ನಿಲ್ಲಿಸಿಬಿಟ್ಟಿದ್ದರು.
