ಸವದತ್ತಿ ಯಲ್ಲಮ್ಮ ದೇಗುಲದ ಹುಂಡಿಯಲ್ಲಿ ದಾಖಲೆಯ ಕಾಣಿಕೆ: 89 ದಿನ, 3.68 ಕೋಟಿ ರೂ. ಸಂಗ್ರಹ
1 min read
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ೮೯ ದಿನಗಳಲ್ಲಿ ಭಕ್ತರು ೩.೮೮ ಕೋಟಿ ರೂಪಾಯಿ ಕಾಣಿಕೆ ಅರ್ಪಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರೇಣುಕಾ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು, 3 ತಿಂಗಳ ಅವಧಿಯಲ್ಲಿ 3.40 ಕೋಟಿ ನಗದು, 20.82 ಲಕ್ಷ ಮೌಲ್ಯದ ಚಿನ್ನಾಭರಣ, 6.39 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿದೆ. ಯಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ಇಡೀ ದಿನ ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಪೊಲೀಸರು, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪ್ರತಿಬಾರಿ ಎಣಿಕೆ ನಡೆದಾಗ 1 ಕೋಟಿಯಿಂದ 1.5 ಕೋಟಿಯವರೆಗೆ ಕಾಣಿಕೆ ಸಂಗ್ರಹವಾಗುತ್ತಿತ್ತು. 2024 ಡಿಸೆಂಬರ್ 14ರಿಂದ 2025 ಮಾರ್ಚ್ 12ರವರೆಗೆ ಮೂರು ತಿಂಗಳ ಅವಧಿಯಲ್ಲಿ ಒಟ್ಟು 3.68 ಕೋಟಿ ರೂ. ಸಂಗ್ರಹವಾಗಿದೆ.
ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆ ಸಮಯದಲ್ಲಿ ಯಲ್ಲಮ್ಮನಗುಡ್ಡದಲ್ಲಿ ಭವ್ಯ ಜಾತ್ರೆ ಜರುಗುತ್ತದೆ. ಈ ವೇಳೆ ಭಕ್ತರ ದಂಡೇ ಗುಡ್ಡಕ್ಕೆ ಹರಿದು ಬರುತ್ತದೆ. ಅದರ ಜೊತೆಗೆ ಕಾಣಿಕೆಯೂ ಅಪಾರ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಆದರೆ, ಕಳೆದ ವರ್ಷ ಬರಗಾಲವಿದ್ದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಅಲ್ಲದೇ ಕಾಣಿಕೆಯೂ ಕಡಿಮೆ ಬಂದಿತ್ತು. ಈ ಬಾರಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ಬಂದಿದ್ದು, ರೈತರು ಸೇರಿ ಎಲ್ಲ ವರ್ಗದ ಜನರು ಸಂತಸದಲ್ಲಿದ್ದಾರೆ. ಆದ್ದರಿಂದ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆ ವೇಳೆ ನಿರೀಕ್ಷೆಗೂ ಮೀರಿ ಭಕ್ತ ಸಾಗರವೇ ದೇವಿಯ ದರ್ಶನಕ್ಕೆ ಬಂದಿತ್ತು. ಹಾಗಾಗಿ, ಕಾಣಿಕೆ ಸಂಗ್ರಹವೂ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.
