ಜನಿಸಿದ (3)ಮೂರೇ ದಿನದಲ್ಲೇ ಹಾಲು ಕೊಡ್ತಿರೋ ಹಸುವಿನ ಕರು
1 min read
ಜಗತ್ತಿನಲ್ಲಿ ಅಸಂಖ್ಯಾತ ವಿಸ್ಮಯಕಾರಿ ಘಟನೆಗಳು ನಡೆಯುತ್ತವೆ. ಆದರೆ ಈ ಸ್ಟೋರಿಯಲ್ಲಿ ಜನಿಸಿದ ಮೂರೇ ದಿನದಲ್ಲಿ ಹಸುವಿನ ಕರು ಹಾಲು ಕರೆಯುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಹಾಲು ಕುಡಿಯುವ ಒಂದು ತಿಂಗಳ ಕರು ಸ್ವತಃ ಹಾಲು ಕರೆಯುವ ಮೂಲಕ ಜನರನ್ನು ವಿಸ್ಮಯಗೊಳಿಸಿದೆ. ಒಂದು ಕಡೆ ಕರುವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿ ಅದರ ಕಾಲಿಗೆ ನಮಸ್ಕಾರ ಮಾಡ್ತಿರೋ ಜನ. ಮತ್ತೊಂದೆಡೆ ಈ ವಿಶಿಷ್ಟ ಕರುವನ್ನು ನೋಡಲು ತಂಡ ತಂಡವಾಗಿ ಬಂದಿರುವ ಜನ. ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ತಾಲೂಕಿನ ಅನ್ನೇಹಾಳ ಗ್ರಾಮ.
ಇಲ್ಲಿ ರೈತರು ಹಾಲು ಕರೀತಿದಾರೆ. ಇದರಲ್ಲೇನು ಸ್ಪೆಷಲ್ ಅನ್ನಬೇಡಿ. ಆದರೆ ಇಲ್ಲಿ ಹಸುವಿನ ಹಾಲು ಕರೆಯುತ್ತಿಲ್ಲ, ಬದಲಾಗಿ ಮೊನ್ನೆ ಮೊನ್ನೆಯಷ್ಟೇ ಭೂಮಿಗೆ ಬಂದ ಕರುವಿನಿಂದ ಹಾಲು ಕರೆಯಲಾಗುತ್ತಿದೆ. ಈ ಅನ್ನೇಹಾಳ ಗ್ರಾಮದ ನಿರಂಜನ ಮೂರ್ತಿ ಎಂಬುವರ ಮನೆಯಲ್ಲಿ ಡೈರಿ ಹಸುವೊಂದು ಮರಿ ಹಾಕಿದ್ದು ಆ ಕರು ಜನಿಸಿದ ಮೂರೇ ದಿನಕ್ಕೆ ಹಾಲು ಕೊಡಲು ಪ್ರಾರಂಭಿಸಿದೆ. ಕರುವಿನ ಕೆಚ್ಚಲಿನಿಂದ ಹಾಲು ಸುರಿಯುತ್ತಿದ್ದನ್ನ ಕಂಡ ನಿರಂಜನ ಮೂರ್ತಿ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ತಾಯಿಯ ಹಾಲು ಕುಡಿದು ಸುತ್ತಾಡಿಕೊಂಡಿರಬೇಕಾದ ಕರು. 31 ದಿನಗಳಿಂದ ಈ ರೀತಿ ಹಾಲು ಕೊಡ್ತಿರೋದು ಅಚ್ಚರಿಗೆ ಕಾರಣವಾಗಿದೆ.
ಈ ವಿಸ್ಮಯಕಾರಿ ಕರು ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಜಮಾವಣೆಯಾಗ್ತಿದ್ದಾರೆ. ಪಕ್ಕದೂರಿಂದ ಬರುವ ಗ್ರಾಮಸ್ಥರು ಶತಮಾನಗಳಲ್ಲೇ ಇಂಥ ಘಟನೆ ನಡೆದಿಲ್ಲ ಅಂತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ನಿರಂಜನ ಮೂರ್ತಿ 6 ತಿಂಗಳ ಹಿಂದೆ ಹಸು ಖರೀದಿಸಿದ್ರು. ಈಗಾಗಲೇ ಆ ಹಸು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಆದ್ರೆ ಆ ಎರಡೂ ಹೆಣ್ಣು ಕರುಗಳು ವಯೋ ಸಹಜವಾಗಿವೆ. ಆದ್ರೆ ಈ ಮೂರನೇಯದ್ದು ಮಾತ್ರ ಕಾಮಧೇನುವಿನಂತೆ ಹುಟ್ಟಿದ ಮೂರೇ ದಿನಕ್ಕೆ ಹಾಲು ಕರೆಯುತ್ತಿದೆ. ದಿನಕ್ಕೆ ಅರ್ಧ ಲೀಟರ್ಗೂ ಹೆಚ್ಚು ಹಾಲು ಕರೆಯುವ ಕರುವನ್ನು ಗ್ರಾಮಸ್ಥರು ಕಾಮಧೇನು ಅಂತಾ ಪೂಜೆ ಮಾಡುತ್ತಿದ್ದಾರೆ.
ಕರುವಿನ ಹಾಲನ್ನ ದೇವರ ಅಭಿಷೇಕ, ಹಾಗೂ ಹುತ್ತಕ್ಕೆ ಎರೆಯಲಾಗುತ್ತಿದೆ. ಸದ್ಯ ಈ ಕರು ಸ್ವಗ್ರಾಮ ಸೇರಿ ಸುತ್ತಮುತ್ತಲ ಗ್ರಾಮಗಳ ಜನರಿಗೆ ಆಕರ್ಷಣೆ ಕೇಂದ್ರವಾಗಿದೆ. ಜಗತ್ತಿನಲ್ಲಿ ವಿಜ್ಞಾನ ಹಾಗೂ ಮನುಷ್ಯನ ತರ್ಕಕ್ಕೆ ನಿಲುಕದ ಅದೆಷ್ಟೋ ಚಮತ್ಕಾರ ನಡೆಯುತ್ತವೆ. ಅಂಥದ್ದೇ ಒಂದು ಚಮತ್ಕಾರ ಇದು ಅನ್ನೋದು ಗ್ರಾಮಸ್ಥರ ಭಾವನೆಯಾಗಿದೆ.
