ಭಾರತೀಯ ಕ್ರಿಕೆಟ್ಗೆ ಕೆಟ್ಟ ಸುದ್ದಿ..ಮಾಜಿ ಕ್ರಿಕೆಟಿಗ ನಿಧನ
1 min read
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ನಲ್ಲಿ ಇಂದು ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಕ್ಕೆ ಭಾರತ ಸಜ್ಜಾಗಿದೆ. ಆದರೆ ಅದಕ್ಕೂ ಮುನ್ನ ಭಾರತೀಯ ಕ್ರಿಕೆಟ್ಗೆ ಆಘಾತಕಾರಿ ಸುದ್ದಿ ಸಿಕ್ಕಿದೆ. ಮಾಜಿ ಕ್ರಿಕೆಟಿಗ, ಮುಂಬೈ ತಂಡದ ದಂತಕತೆ ಪದ್ಮಾಕರ್ ಶಿವಾಳ್ಕರ್ (84) ನಿಧನರಾಗಿದ್ದಾರೆ. ಸ್ಪಿನ್ನರ್ ಆಗಿ ಮಿಂಚಿದ್ದ ಪದ್ಮಾಕರ್ ಶಿವಾಳ್ಕರ್ ತಮ್ಮ ಒಟ್ಟಾರೆ ವೃತ್ತಿ ಜೀವನದಲ್ಲಿ 550ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದರು.
ಪದ್ಮಾಕರ್ ಶಿವಾಳ್ಕರ್ ಮುಂಬೈ ಕ್ರಿಕೆಟ್ಗೆ 2 ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಸುಮಾರು 20 ವರ್ಷಗಳ ಕಾಲ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಅವರು ಅನೇಕ ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದರು. ದುರಾದೃಷ್ಟವಶಾತ್, ಅವರಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. ಶಿವಾಳ್ಕರ್, ಬಿಷನ್ ಸಿಂಗ್ ಬೇಡಿ ಸಮಕಾಲೀನರು. ಆ ಸಮಯದಲ್ಲಿ ಬಿಷನ್ ಸಿಂಗ್ ಬೇಡಿ ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ಗಳಲ್ಲಿ ಒಬ್ಬರಾಗಿದ್ದರಿಂದ ಶಿವಾಳ್ಕರ್ಗೆ ಅವಕಾಶ ಸಿಕ್ಕಿರಲಿಲ್ಲ.
ಪದ್ಮಾಕರ್ ಶಿವಾಳ್ಕರ್ ೧೯೧/೬೨ ರಿಂದ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಶುರುಮಾಡಿದರು. ೧೯೬೧ ರಿಂದ ೧೯೮೮ ರವರೆಗೂ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಈ ಅವಧಿಯಲ್ಲಿ ೧೨೪ ಪಂದ್ಯಗಳನ್ನು ಆಡಿ ಒಟ್ಟು ೫೮೯ ವಿಕೆಟ್ಗಳನ್ನು ಪಡೆದಿದ್ದಾರೆ. ೪೨ ಬಾರಿ ೫ ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.ಒಂದೇ ಪಂದ್ಯದಲ್ಲಿ ೧೩ ಬಾರಿ ೧೦ ವಿಕೆಟ್ಗಳನ್ನು ಪಡೆದ ಹೆಗ್ಗಳಿಕೆ ಅವರದ್ದಾಗಿತ್ತು. ೧೯೭೨/೭೩ ರ ರಣಜಿ ಟ್ರೋಫಿ ಫೈನಲ್ನಲ್ಲಿ ಶಿವಾಳ್ಕರ್ ತಮಿಳುನಾಡು ವಿರುದ್ಧ ಒಟ್ಟು ೧೩ ವಿಕೆಟ್ ಕಬಳಿಸಿದ್ದರು. ಆ ಮೂಲಕ ಮುಂಬೈ ತಂಡ ಸತತ ೧೫ ನೇ ಬಾರಿಗೆ ರಣಜಿ ಟ್ರೋಫಿ ಗೆದ್ದುಕೊಂಡಿತ್ತು. ಪದ್ಮಾಕರ್ ಶಿವಾಳ್ಕರ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
