Boat Upside Double Death. ಉಡುಪಿ ಕೋಡಿಬೆಂಗ್ರೆ ಡೆಲ್ಟಾ ಬೀಚಿನಲ್ಲಿ ದೋಣಿ ಮುಗುಚಿ ಇಬ್ಬರ ಸಾವು.
Boat Upside Double Death. ಉಡುಪಿ ಕೋಡಿಬೆಂಗ್ರೆ ಡೆಲ್ಟಾ ಬೀಚಿನಲ್ಲಿ ದೋಣಿ ಮುಗುಚಿ ಇಬ್ಬರ ಸಾವು.
ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕೋಡಿಬೆಂಗ್ರೆ ಬಳಿಯ ಅಳಿವೆ ಬಾಗಿಲಿನ ಮಲ್ಪೆ ಪೊಲೀಸ್ ಠಾಣಾ ಸರಹದ್ದಿನ ಡೆಲ್ಟಾ ಬೀಚ್ ಬಳಿ ಭೀಕರ ದೋಣಿ ದುರಂತದಲ್ಲಿ ಮೈಸೂರು ಮೂಲದ ಇಬ್ಬರು ಯುವಕರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮೈಸೂರಿನ ಖಾಸಗಿ ಕಂಪನಿ ಉದ್ಯೋಗಿಗಳಾದ ಸರಸ್ವತಿಪುರಂ ನಿವಾಸಿಗಳಾದ ಶಂಕರಪ್ಪ (22) ಮತ್ತು ಸಿಂಧು (23) ಎಂದು ಗುರ್ತಿಸಲಾಗಿದೆ.
ಮೈಸೂರಿನ ಸರಸ್ವತಿಪುರಂನಿಂದ ಸುಮಾರು 28 ಜನರಿದ್ದ ಬಿಪಿಒ ಉದ್ಯೋಗಿಗಳು ಉಡುಪಿಗೆ ಪ್ರವಾಸಕ್ಕೆ ಬಂದಿದ್ದರು.
ಸ್ಥಳೀಯ ಎರಡು ಖಾಸಗಿ ಪ್ರವಾಸಿ ದೋಣಿಗಳನ್ನು ಬಾಡಿಗೆಗೆ ಪಡೆದು ಪ್ರತಿ ದೋಣಿಯಲ್ಲಿ ತಲಾ 14 ಜನರಂತೆ ಸಮುದ್ರಕ್ಕೆ ಇಳಿದಿದ್ದರು.
ಇಲ್ಲಿ ಸಹಜ ಅಲೆಗಳ ಅಬ್ಬರ ಜೋರಾಗಿದ್ದರಿಂದ ಮಧ್ಯಾಹ್ನದ ಸುಮಾರಿಗೆ ಅನಿರೀಕ್ಷಿತವಾಗಿ ಬಂದ ಭಾರೀ ಗಾತ್ರದ ಅಲೆ ಬೋಟ್‌ಗೆ ಅಪ್ಪಳಿಸಿದೆ. ಇದರ ರಭಸಕ್ಕೆ ದೋಣಿ ಮಗುಚಿ ಬಿದ್ದಿದೆ. ಪ್ರವಾಸಿಗರ ಚೀರಾಟ ಕೇಳಿ ಸ್ಥಳೀಯ ಮೀನುಗಾರರು ತಕ್ಷಣವೇ ಮುಳುಗುತ್ತಿದ್ದವರನ್ನು ದಡಕ್ಕೆ ತರುವ ಪ್ರಯತ್ನಿಸಿದರಾದರೂ ಶಂಕರಪ್ಪ ಮತ್ತು ಸಿಂಧು ಮೃತಪಟ್ಟಿದ್ದಾರೆ.
ಉಳಿದ ಧರ್ಮರಾಜ್ (26) ಮತ್ತು ದಿಶಾ (26) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉಳಿದ ಪ್ರವಾಸಿಗರು ಪ್ರಾಣಾಪಾಯದಿಂದ ಉಳಿದಿದ್ದಾರೆ.
ದುರಂತಕ್ಕೆ ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಸಮುದ್ರ ವಿಹಾರಕ್ಕೆ ತೆರಳುವಾಗ ‘ಲೈಫ್ ಜಾಕೆಟ್’ (Life Jacket) ಕಡ್ಡಾಯ. ಬೋಟ್ ಸಿಬ್ಬಂದಿ ಲೈಫ್ ಜಾಕೆಟ್ ನೀಡಿದ್ದರೂ, ಕೆಲವು ಪ್ರವಾಸಿಗರು ಅದನ್ನು ಧರಿಸದೆ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಕೆಲ ಮೂಲಗಳ ಪ್ರಕಾರ, ಬೋಟ್‌ನಲ್ಲಿ ಅಗತ್ಯವಿದ್ದಷ್ಟು ಲೈಫ್ ಜಾಕೆಟ್‌ಗಳೇ ಇರಲಿಲ್ಲ ಎಂಬ ಆರೋಪವಿದೆ.
ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಹಾನ್ ಮತ್ತು ಸೂಫಿಯಾನ ಎಂಬುವವರಿಗೆ ಸೇರಿದ ಬೋಟ್‌ಗಳನ್ನು ಈ ಪ್ರವಾಸಕ್ಕೆ ಬಳಸಲಾಗಿತ್ತು ಎಂದು ತಿಳಿದುಬಂದಿದೆ. ನಿರ್ಲಕ್ಷ್ಯ ಮತ್ತು ಸುರಕ್ಷತಾ ಲೋಪದ ಅಡಿಯಲ್ಲಿ ಬೋಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ
![]()
