ನೇತ್ರದಾನ ನಂತರ ದೇಹದಾನದ ಮೂಲಕ ಸಾರ್ಥಕ ಮೆರೆದ ಹೊಸರೋಡಿನ ಜಡೆ ರೋಹಿಣಿ
1 min read

ಬೆಂ,ನ,07: ಎಲೆಕ್ಟ್ರಾನಿಕ್ ಸಿಟಿಯ ಹೊಸರೋಡಿನಲ್ಲಿ ಜಡೆ ರೋಹಿಣಿ 72ವರ್ಷ ಅವರು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದು ಅವರ ಇಚ್ಚೆಯಂತೆ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರನಿಧಿಗೆ ದಾನಮಾಡಿ, ನಂತರ ದೇಹವನ್ನು ಇಂದು ದಿ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾನಮಾಡಿಸುವ ಮುಖಾಂತರ ಜಡೆ ರೋಹಿಣಿ ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದು ಕಣ್ಣಪ್ಪ ಎಂತಲೇ ಖ್ಯಾತಿವೆತ್ತ ಹೊಸಬೆಳಕು ಜಿಗಣಿ ರಾಮಕೃಷ್ಣ ನುಡಿ ನಮನ ಅರ್ಪಿಸಿದರು.
ದಿ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯರೊಂದಿಗೆ ಕೊನೆಯ ಪೂಜಾವಿಧಾನಗಳನ್ನು ಮುಗಿಸಿ ಕುಟುಂಬಸ್ಥರು ದೇಹವನ್ನು ಹಸ್ತಾಂತರಿಸಿದರು. ಇದೇ ವೇಳೆ ಮೃತರ ಪತಿ ಜಡೆ ನಾಗರಾಜುರನ್ನು ಹೊಸಬೆಳಕು ರಾಮಕೃಷ್ಣ ಗೌರವಿಸಿದರು.
ಮೃತರ ಮಗ ಅವಿನಾಶ್ ಭಾವುಕರಾಗಿ ಮಾತನಾಡಿ ನನ್ನಮ್ಮನ ಇಚ್ಛೆಯಂತೆ ಅಂಗಾಂಗ ಮತ್ತು ದೇಹದಾನ ಮಾಡಿದ್ದೇವೆ,
ಈ ಕಾಯಕ ಇಡೀ ನಮ್ಮ ಕುಟುಂಬಕ್ಕೆ ಗೌರವತಂದಿದೆ. ನನ್ನಮ್ಮನಂತೆ ತಾವುಗಳೆಲ್ಲರೂ ಅಂಗಾಂಗದಾನಕ್ಕೆ ಮುಂದಾಗಬೇಕೆಂದರು.
ಮತ್ತೊಬ್ಬ ಮಗ ಅರವಿಂದ ನನ್ನ ತಾಯಿಯ ಕಣ್ಣುಗಳನ್ನು ದಾನ ಮಾಡಿದ್ದೇವೆ, ಆ ಕಣ್ಣುಗಳು ನಾಳೆ ಯಾರದೋ ಕಣ್ಣುಕಾಣದ ಇಬ್ಬರು ಕಾರ್ನಿಯಾ ಅಂಧರ ಮನೆಯಲ್ಲಿ ಹೊಸಬೆಳಕಿನ ಹೊಸಜೀವನ ತರಲಿವೆ. ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸಿಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದೆ. ಹೀಗಾಗಿ ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಅಂಧ ಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಮನವಿಮಾಡಿದರು. ಆಪರೇಷನ್ ಆಗಿದ್ದರೂ ತಡರಾತ್ರಿಯಲ್ಲಿ ಜೊತೆಯಲ್ಲಿ ನಿಂತು ನೇತ್ರದಾನ, ದೇಹದಾನ ಮಾಡಿಸಿದ ಹೊಸಬೆಳಕು ಟ್ರಸ್ಟಿನ ಡಾ. ರಾಮಕೃಷ್ಣ ಮತ್ತು ಮಂಜುಳಾರಾಮಕೃಷ್ಣ ಅವರ ಸೇವೆ ಅಪಾರ ಎಂದರು.
ಡಾ.ರಾಜಕುಮಾರ್ ಮತ್ತು ಪುನೀತ ರಾಜಕುಮಾರ ಅವರು ನೇತ್ರದಾನಕ್ಕೆ ಸ್ಫೂರ್ತಿ ಎಂಬುದು ಸೊಸೆಯಂದಿರಾದ ವಿಮಲಾ ಮತ್ತು ಸೌಮ್ಯ ಅಭಿಪ್ರಾಯಪಟ್ಟರು.
ನೇತ್ರದಾನ ಮತ್ತು ದೇಹದಾನ ಕಾಯಕದಲ್ಲಿ ಜೊತೆಯಾಗಿದ್ದು ಮೊಮ್ಮಕ್ಕಳು ನಾರಾಯಣ ನೇತ್ರಾಲಯದ ಅಶೋಕ್, ದಿ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜಿನ ಅನಾಟಮಿ ಮುಖ್ಯಸ್ಥ ಡಾ.ಜಯಶ್ರೀ, ಇತರೆ ವೈದ್ಯರು ಮತ್ತು ನೂರಾರು ಜನ ವೈದ್ಯಕೀಯ ವಿದ್ಯಾರ್ಥಿಗಳು ಹಾಜರಿದ್ದರು. .
![]()

