ಕರುಣೆ ಇಲ್ಲದ ಮಳೆರಾಯ..ತಂದೆಯ ಕಣ್ಮುಂದೆಯೇ ಹಳ್ಳಕ್ಕೆ ಬಿದ್ದು ಇಬ್ಬರು ಮಕ್ಕಳು ನಿಧನ
1 min read
ಬೆಳಗಾವಿ ; ರಾಜ್ಯದಲ್ಲಿ ಮಳೆಯಬ್ಬರ ದಿನೇ ದಿನೇ ಜೋರಾಗ್ತಿದೆ. ಮೊದಲು ರಾಜಧಾನಿಯಲ್ಲಿ ಆರ್ಭಟಿಸಿದ್ದ ಮಳೆರಾಯ ಈಗ ಇತರೆ ಜಿಲ್ಲೆಗಳಿಗೆ ದಾಂಗುಡಿ ಇಟ್ಟಿದ್ದಾನೆ. ಭಾರೀ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು ಹಳ್ಳ ದಾಟುವಾಗ ತಂದೆಯ ಮುಂದೆಯೇ ಕಂದಮ್ಮಗಳು ವಿಲವಿಲ ಒದ್ದಾಡಿ ಜೀವ ಬಿಟ್ಟಿವೆ.
ಮರುಳಿನ ಗುಂಡಿಗೆ ಬಿದ್ದು ಒಂದು ಎತ್ತು ಹಾಗೂ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯ ಸಂಬರಗಿ ಗ್ರಾಮದಲ್ಲಿ ದಾರುಣ ಘಟನೆ ನಡೆದಿದೆ. ಮಳೆರಾಯನ ಅಬ್ಬರಕ್ಕೆ ನಿನ್ನೆ ಸಂಜೆ ಸಂಜಯ್ ಕಾಂಬಳೆ ಎಂಬುವವರು ಎತ್ತಿನಬಂಡಿಯಲ್ಲಿ ಮಕ್ಕಳ ಜೊತೆ ಗದ್ದೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ರು. ಈ ವೇಳೆ ಮಳೆಗೆ ಅಗ್ರಣಿ ಹಳ್ಳಕ್ಕೆ ಏಕಾಏಕಿ ನೀರಿನ ಹರಿವು ಜಾಸ್ತಿಯಾಗಿದೆ. ಇಂತ ಸಂದರ್ಭದಲ್ಲಿ ಎತ್ತಿನ ಚಕ್ಕಡಿ ಸಮೇತ ಅಗ್ರಣಿ ಹಳ್ಳದ ಮರುಳಿನ ಗುಂಡಿಗೆ ಬಿದ್ದು ಒಂದು ಎತ್ತು ಹಾಗೂ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಂಜಯ್ ಮತ್ತೋರ್ವ ಮಗ ವೇದಾಂತನನ್ನು ರಕ್ಷಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರ ಸಹಾಯದಿಂದ ಮರುಳಿನ ಗುಂಡಿಯಲ್ಲಿ ಸಿಕ್ಕಿಬಿದ್ದಿದ್ದ ಒಂದು ಎತ್ತನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಬಾಲಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
