c24kannada

ವಸ್ತುಸ್ಥಿತಿಯತ್ತ

ಹದಗೆಟ್ಟ ಪೋಲಂಪಲ್ಲಿ ರಸ್ತೆ: ಸಂಚಾರ ದುಸ್ತರ ಪ್ರಯಾಣಿಕರಿಗೆ ಕಿರಿಕಿರಿ, ವಾಹನ ಚಾಲನೆಗೆ ಚಾಲಕರ ಹರಸಾಹಸ

Share it

ಗುಡಿಬಂಡೆ: ರಸ್ತೆ ತುಂಬೆಲ್ಲಾ ಗುಂಡಿಗಳ ದರ್ಬಾರ್, ಅಲ್ಲಲ್ಲಿ ಚದುರಿ ಬಿದ್ದಿರುವ ಕಲ್ಲುಗಳು, ಮಳೆಬಂದು ಗುಂಡಿಗಳ ತುಂಬ ನಿಂತಿರುವ ಮಳೆ ನೀರು, ವಾಹನ ಚಾಲನೆ ಮಾಡಲು ಪರದಾಡುತ್ತಿರುವ ಬಸ್, ಕಾರು, ಲಾರಿ ಬೈಕ್ ಚಾಲಕರು… ನೀರುತುಂಬಿದ- ಹಳ್ಳಗಳ ನಡುವೆ ನಿಧಾನವಾಗಿ ಸಾಗುತ್ತಿರುವ ಬೈಕ್ ಸವಾರರು… ದೇವರೇ ಯಾವಾಗ ಈ ರಸ್ತೆ ಅಭಿವೃದ್ಧಿಯಾಗುತ್ತದೆ ಎಂದು ಮನ ದಲ್ಲಿಯೇ ಶಪಿಸುತ್ತಿರುವ ಪ್ರಯಾಣಿಕರು… ಇದು ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡಿಬಂಡೆ – ಪೋಲಂಪಲ್ಲಿ ಮಾರ್ಗವಾಗಿ ವರ್ಲಕೊಂಡ ರಾಷ್ಟ್ರೀಯ ಹೆದ್ದಾರಿ 44 ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪ್ರತಿನಿತ್ಯ ಕಂಡು ಬರುತ್ತಿರುವ ದೃಶ್ಯ.

 

ರೇಣುಮಾಕಲಹಳ್ಳಿ ಕ್ರಾಸ್ ನಿಂದ ವರ್ಲಕೊಂಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ವರೆಗಿನ ರಸ್ತೆ ತುಂಬ ಹದ ಗೆಟ್ಟಿದ್ದು ಈ ರಸ್ತೆಯಲ್ಲಿ ಸಂಚರಿಸುವವರು ಜೀವವನ್ನೇ ಕೈಯಲ್ಲಿ ಹಿಡಿದು ಪ್ರಯಾಣಿ ಸುವಂತಾಗಿದೆ. ವರ್ಲಕೊಂಡ ಗ್ರಾಮದಿಂದ ರೇಣುಮಾಕಲಹಳ್ಳಿ ಕ್ರಾಸ್‍ವರೆಗೆ ಸುಮಾರು 12 ಕಿ.ಮೀ. ರಸ್ತೆ ಸಂಚರಿಸಲು ಯೋಗ್ಯವಾಗಿಲ್ಲ. ಅಲ್ಲಲ್ಲಿ ಹಳ್ಳಗಳು ಸೃಷ್ಟಿಯಾಗಿದ್ದು, ವಾಹನ ಸವಾರರು, ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚರಿಸುವಾಗ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.

 

ವರ್ಲಕೊಂಡ ಗ್ರಾಮ ಸೇರಿದಂತೆ ಇದೇ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರುವ ಸುಮಾರು 20ಕ್ಕೂ ಹೆಚ್ಚು ಗ್ರಾಮಸ್ಥರು ತಾಲ್ಲೂಕು ಕೇಂದ್ರ ಗುಡಿಬಂಡೆಗೆ ಸಂಚಾರ ಮಾಡಲು ಕೆಎಸ್‍ಆರ್‍ಟಿಸಿ ಬಸ್, ಆಟೋ, ಕಾರು, ಗೂಡ್ಸ್‍ವಾಹನ, ಬೈಕ್ ಸೇರಿದಂತೆ ನಿತ್ಯವೂ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಈ ಮಾರ್ಗದಲ್ಲಿ ಚಿಕ್ಕತಮ್ಮನಳ್ಳಿ, ನಡುವನಹಳ್ಳಿ, ಬೊಮ್ಮನಹಳ್ಳಿ, ಗಿಡ್ಡಪ್ಪನಹಳ್ಳಿ, ಜಂಗಾಲಹಳ್ಳಿ, ಪೋಲಂಪಲ್ಲಿ, ಮೇಡಿಮಾಕಲಹಳ್ಳಿ, ಸದಾಶಿವನಹಳ್ಳಿ, ಕೊಪ್ಪಕಾಟೇನಹಳ್ಳಿ, ಕಮ್ಮಗುಟ್ಟಹಳ್ಳಿ ಅಪ್ಪಿರೆಡ್ಡಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಿದ್ದು, ಈ ಹದಗೆಟ್ಟ ರಸ್ತೆಯಿಂದ ಗ್ರಾಮಸ್ಥರು ಕಿರಿಕಿರಿ ಅನುಭವಿಸುತ್ತಿದ್ದಾರೆ.

 

12 ವರ್ಷಗಳಿಂದ ರಸ್ತೆ ಅಭಿವೃದ್ಧಿ ಭಾಗ್ಯವನ್ನೇ ಕಂಡಿಲ್ಲ. ರಸ್ತೆ ಸಂಪೂರ್ಣ ಹದ ಗೆಟ್ಟಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಸಾಕಷ್ಟು ಕಷ್ಟವಾಗುತ್ತದೆ. ಈಗಾಗಲೇ ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಸಾವು-ನೋವುಗಳು ಆಗಿದೆ. ಆದರೂ, ಅಧಿಕಾರಿಗಳಾಗಲಿ ಅಥವಾ ಜನ ಪ್ರತಿನಿಧಿಗಳಾಗಲಿ ಈ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿಲ್ಲ ಎಂದು ಸಿಪಿಐಎಂ ಮುಖಂಡ ಹಾಗೂ ವಕೀಲ ಶಿವಪ್ಪ ತಿಳಿಸಿದರು. ಇದೇ ರಸ್ತೆಯಲ್ಲಿ ನಿತ್ಯವೂ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಯಾಣಿಸುತ್ತಾರೆ. ಆದರೂ, ರಸ್ತೆ ಸರಿಪಡಿಸುವ ಕೆಲಸವನ್ನು ಅವರು ಮಾಡುತ್ತಿಲ್ಲ. ಇನ್ನಾದರೂ ರಸ್ತೆ ಅಭಿವೃದ್ಧಿಗೆ ಕ್ರಮಹಿಸಬೇಕು. ಇಲ್ಲದಿದ್ದರೇ ಗ್ರಾಮಸ್ಥರೆಲ್ಲ ಸೇರಿ ರಸ್ತೆ ತಡೆ ನಡೆಸಿ ಪ್ರತಿ ಭಟನೆ ನಡೆಸಲು ಚಿಂತಿಸುತ್ತಿದ್ದಾರೆ.

 

ಹಾಗಾಗಿ, ಗ್ರಾಮಸ್ಥರು ತಾಳ್ಮೆ ಕಳೆದುಕೊಳ್ಳುವ ಮುನ್ನವೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೇತ್ತು ರಸ್ತೆ ಅಭಿವೃದ್ಧಿಗೆ ಕ್ರಮವಹಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, ಪೋಲಂಪಲ್ಲಿ ರಸ್ತೆಗೆ 10 ವರ್ಷಗಳಹಿಂದೆ ಗುತ್ತಿಗೆದಾರ ಹೊಸದಾಗಿ ಗುತ್ತಿಗೆ ಪಡೆದಿದ್ದು ಹೊಸದಾಗಿ ಡಾಂಬರೀಕರಣ ಮಾಡಿದಾಗ ಮಳೆ ಬಂದಕಾರಣ ರಸ್ತೆ ಹಾಳಾಗಿದೆ. ಮುಂದಿನ ದಿನಗಳ್ಳಿ ಸುಮಾರು 1.35 ಕೋಟಿ ವೆಚ್ಚದಲ್ಲಿ ಪೋಲಂಪಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗುವುದು ಎಂದರು.

Loading

Leave a Reply

Your email address will not be published. Required fields are marked *

error: Content is protected !!