ಇಡೀ ರಾತ್ರಿ ಸುರಿದ ಮಳೆಗೆ ಉದ್ಯಾನನಗರಿಯ ಹಲವು ರಸ್ತೆಗಳು ಸಂಪೂರ್ಣ ಜಲಾವೃತ
1 min read
ಬೆಂಗಳೂರು: ನಗರದಲ್ಲಿ ಎಲ್ಲರೂ ಮಲಗಿದ ಮೇಲೆ ಆರಂಭವಾದ ಮಳೆ ರಾತ್ರಿ ಎಲ್ಲ ಬಿಡದಂತೆ ಸುರಿದಿದೆ. ಇದರಿಂದ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ರಾತ್ರಿಯನ್ನು ಮಳೆ ನೀರಿನಲ್ಲೇ ಕಳೆದರು. ಅಂಡರ್ಪಾಸ್ಗಳು, ರಸ್ತೆಗಳು, ಕೆಲ ಅಪಾರ್ಟ್ಮೆಂಟ್ಗಳ ಆವರಣಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಇದರಿಂದ ಜನರು ರಾತ್ರಿಯೆಲ್ಲ ಪರದಾಡುವಂತೆ ಆಗಿದೆ. ಕೆಲವರಂತೂ ಬಿಬಿಎಂಪಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಬಳೆ ಬಂದು ಸಮಸ್ಯೆ ಆದಾಗ ಮಾತ್ರ ಬಂದು ಬಿಬಿಎಂಪಿಯವರು ಕ್ಲೀನ್ ಮಾಡಿ ಹೋಗುತ್ತಾರೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಿಲ್ಲ ಎಂದು ನಗರವಾಸಿಗಳು ಹೇಳುತ್ತಿದ್ದಾರೆ.
ಇನ್ನು ಮಲ್ಲೇಶ್ವರಂ, ವಿಜಯನಗರ, ಯಶವಂತಪುರ, ಆರ್.ಟಿ. ನಗರ, ಪೀಣ್ಯ, ಕಾರ್ಪೊರೇಷನ್, ಮೆಜೆಸ್ಟಿಕ್, ಚಾಮರಾಜಪೇಟೆ, ಶಿವಾಜಿನಗರ, ಕೆ.ಆರ್. ಮಾರುಕಟ್ಟೆ, ಹೆಬ್ಬಾಳ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗವಾರ, ಜಯನಗರ, ಚಂದ್ರಲೇಔಟ್, ರಾಜಾಜಿನಗರ, ನಾಗರಬಾವಿ ಬೊಮ್ಮನಹಳ್ಳಿ, ನಾಯಂಡಹಳ್ಳಿ, ಆರ್.ಆರ್. ನಗರ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗವಾರ, ಜಯನಗರ, ಚಂದ್ರಲೇಔಟ್, ರಾಜಾಜಿನಗರ, ನಾಗರಬಾವ ಸೇರಿದಂತೆ ಉದ್ಯಾನನಗರಿಯ ಬಹುತೇಕ ಪ್ರದೇಶಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು.
ಕೊತ್ತನೂರು, ಹೆಣ್ಣೂರು ಕ್ರಾಸ್ ಬಳಿಯು ಮನೆಗಳಿಗೆ ನೀರು ನುಗ್ಗಿವೆ. ನಾಯಂಡಹಳ್ಳಿ ಅಂಡರ್ಪಾಸ್ ಅಂತೂ ಕಾಲುವೆಯಂತೆ ಆಗಿದ್ದು ಬಿಎಂಟಿಸಿ ಬಸ್ ನೀರಿನಲ್ಲಿ ನಿಂತಿದೆ. ಇನ್ನು ರಾತ್ರಿ ಸುರಿದ ಮಳೆಯಿಂದ ಕೆಲ ನಮ್ಮ ಮೆಟ್ರೋದ ನಿಲ್ದಾಣದ ಹೊರ ಭಾಗದಲ್ಲಿ ನೀರು ನಿಂತಿದ್ದರಿಂದ ವಾಹನಗಳು ಸಂಚಾರ ಅಸ್ತವ್ಯಸ್ತವಾಗಿದೆ. ಇದರಿಂದ ಬೆಳಂ ಬೆಳಗ್ಗೆ ಪ್ರಯಾಣಿಕರು ಟ್ರಾಫಿಕ್ ಬಿಸಿಯಿಂದ ಬೇಸರ ವ್ಯಕ್ತಪಡಿಸಿದರು.
ಭುವನೇಶ್ವರಿ ನಗರದ ಬಹುತೇಕ ಮನೆಗಳಿಗೆ ನೀರು ಹೋಗಿದ್ದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಡ್ರೈನೇಜ್ ಸಮಸ್ಯೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ತೊಂದರೆ ಎದುರಾಗಿದೆ. ಮನೆಯಲ್ಲಿ ಆಹಾರ, ದಿನಸಿಗಳು ಸೇರಿದಂತೆ ಎಲ್ಲವೂ ನೀರು ಪಾಲಾಗಿವೆ. ಗಾರ್ಡನ್ ಸಿಟಿಯ ಹೊಸೂರು ರೋಡ್ನ ಹೊಂಗಸಂದ್ರದ ಮೆಟ್ರೋ ಕೆಳಗೆ ನೀರು ನಿಂತಿದೆ. ಕೊರೊಮಂಗಳದ ರಾಜುಕಾಲುವೆ ತುಂಬಿದೆ. ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಆವಾಂತರಗಳು ಸೃಷ್ಟಿ ಆಗಿದೆ. ಕೆಲವು ಕಡೆ ಚರಂಡಿ, ಮೋರಿಯಲ್ಲಿದ್ದ ಕಸ ಎಲ್ಲ ಮೇಲೆ ಬಂದು ಮನೆ ಹಾಗೂ ರಸ್ತೆಗಳಲ್ಲಿ ಬಿದ್ದಿದೆ.
