ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನ ವಿರೋಧಿಸಿ ಮೇ. 15ಕ್ಕೆ ಪ್ರತಿಭಟನೆ: ವೆಂಕಟೇಶ್ ಕುಲಕರ್ಣಿ
1 min read
ಗದಗ: ಸಣ್ಣ-ಸಣ್ಣ ಸಮಾಜ ಜನಿವಾರ ಧರಿಸುವ ಸಮುದಾಯದಲ್ಲಿದ್ದು, ಅವುಗಳನ್ನು ಒಗ್ಗೂಡಿಸಿಕೊಂಡು ನಮ್ಮ ಸನಾತನ ಪರಂಪರೆ ಉಳಿಸಿಕೊಂಡು ಹೋಗುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಇತ್ತೀಚಿಗೆ ನಡೆದ ಸಿ.ಇ.ಟಿ ಪರೀಕ್ಷೆಯಲ್ಲಿ ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದರು. ಹುಬ್ಬಳ್ಳಿ ನೀಟ್ ಪರೀಕ್ಷೆಯಲ್ಲೂ ಇದೇ ರೀತಿ ಆಗಿದೆ. ಈ ಘಟನೆಯಲ್ಲಿ ಒಬ್ಬ ವಿದ್ಯಾರ್ಥಿಯ ಜನಿವಾರವನ್ನು ತೆಗೆಯುವಂತೆ ಅಧಿಕಾರಿಗಳು ಸೂಚಿಸಿದ್ದು, ಈ ಕ್ರಮವನ್ನು ಖಂಡಿಸಿ ಬ್ರಾಹ್ಮಣ ಸಮಾಜವು ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿತ್ತು. ಈ ರೀತಿಯ ದಬ್ಬಾಳಿಕೆ ದೌರ್ಜನ್ಯ ವಿರೋಧಿಸಿ ಮೇ. 15 ರಂದು ನಗರದ ವಿಠ್ಠಲಾರೂಢ ಮಂದಿರದಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಜನಿವಾರ ಸಮುದಾಯದ ಜನ ಸೇರಿ ಪ್ರತಿಭಟನೆ ಹಮ್ಮಿಕೊಂಡು ಮನವಿ ಸಲ್ಲಿಸಲಾಗುವುದು ಅಂತ ಬ್ರಾಹ್ಮಣ ಸಮುದಾಯದ ಗದಗ ಜಿಲ್ಲಾಧ್ಯಕ್ಷ ವೆಂಕಟೇಶ ಎಸ್. ಕುಲಕರ್ಣಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪದೇ-ಪದೇ ಈ ರೀತಿಯ ಘಟನೆ ನಡೆಯದಂತೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಇತ್ತೀಚೆಗೆ ಕೊರಳಲ್ಲಿನ ಮಂಗಳಸೂತ್ರ, ರುದ್ರಾಕ್ಷಿ, ಶಿವಲಿಂಗವನ್ನ ತೆಗೆದು ಪರೀಕ್ಷೆಗೆ ಬರುವಂತಹ ವಿಷಯಗಳನ್ನ ವಿರೋಧಿಸುವ ಕ್ರಮವನ್ನು ನಮ್ಮ ಜಿಲ್ಲೆಯ ಸಂಘಟನೆ ಪ್ರಾರಂಭಿಸುತ್ತದೆ. ಈ ರೀತಿಯ ಘಟನೆ ಮರುಕಳಿಸದಂತೆ ಸರಕಾರಕ್ಕೆ ಆಗ್ರಹಿಸುತ್ತೇವೆ ಎಂದರು.
ಎಸ್. ಎಸ್. ಕೆ ಸಮಾಜದ ಹಿರಿಯ ಮುಖಂಡ ಶ್ರೀಕಾಂತ ಖಟವಟೆ ಮಾತನಾಡಿ, ಪರಂಪರಾಗತವಾಗಿ ಬಂದ ನಮ್ಮ ಜನಿವಾರ ನಮ್ಮ ಸನಾತನ ಧರ್ಮದ ಗುರುತಾಗಿದೆ. ಅದಕ್ಕಾಗಿ ಸರಕಾರ ತಮ್ಮ ನಿಯಮಗಳನ್ನ ಬದಲಿಸಬೇಕು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಘಟನೆ ಮಾಡಿ ಜಾಗೃತಿ ಮೂಡಿಸಲಾಗುವುದು. ಈ ರೀತಿಯ ಘಟನೆಯು ಧಾರ್ಮಿಕ ಸಂವೇದನೆಗಳಿಗೆ ಧಕ್ಕೆ ತಂದಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.
