ಐತಿಹಾಸಿಕ ಬೆಂಗಳೂರು ಕರಗ ನೋಡೋದೆ ಕಣ್ಣಿಗೆ ಹಬ್ಬ..ಹೂವಿನ ಕರಗಕ್ಕೆ ಕ್ಷಣಗಣನೆ
1 min read
ಬೆಂಗಳೂರು : ವಿಶ್ವವಿಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿಯ ಐತಿಹಾಸಿಕ ಕರಗ ನೋಡೋದೆ ಕಣ್ಣಿಗೆ ಹಬ್ಬ.. ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹಸಿ ಕರಗ ಬಹಳ ಅದ್ಧೂರಿಯಾಗಿ ನಡೆದಿದ್ದು, ಇಂದು ರಾತ್ರಿ ನಡೆಯೋ ಹೂವಿನ ಕರಗಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಟ್ನಲ್ಲಿ ಕರಗ ಉತ್ಸವ ವಿಶ್ವವಿಖ್ಯಾತಿ ಪಡೆದಿದ್ದು.. ಹೂವಿನ ಕರಗ ವೀಕ್ಷಣೆಗೆ ಲಕ್ಷಾಂತರ ಮಂದಿ ಕಾತುರದಿಂದ ಕಾಯ್ತಿದ್ದಾರೆ.. ಈ ಸುಂದರ ಘಳಿಗೆಗೆ ಕೌಂಟ್‌ಡೌನ್ ಶುರುವಾಗಿದ್ದು, ಐತಿಹಾಸಿಕ ಕರಗವನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ.
ಬಿಬಿಎಂಪಿ ಮುಖ್ಯ ಕಚೇರಿಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಪೂಜೆಯ ಬಳಿಕ, ಹಸಿ ಕರಗ ಧರ್ಮರಾಯ ಸ್ವಾಮಿ ದೇವಾಲಯ ತಲುಪಿದ್ದು ಅಲ್ಲಿ ಪೂಜೆ ನಡೆಯುತ್ತಿದೆ. ರಾತ್ರಿಯೆಲ್ಲಾ ದ್ರೌಪದಿ ದೇವಿಗೆ ಹಾಡಿನ ರೂಪದಲ್ಲಿ ಪೊಂಗಲ್ ಸೇವೆ ಸಲ್ಲಿಸಲಾಯ್ತು.ಇಂದು ಮಧ್ಯರಾತ್ರಿ ಚೈತ್ರ ಪೂರ್ಣಮಿಯಂದು ಹೂವಿನ ಕರಗ ದೇವಾಲಯದಿಂದ ಹೊರಗೆ ಬರಲಿದ್ದು, ನಗರದ ಸುಮಾರು 25ಕ್ಕೂ ಪೇಟೆಗಳನ್ನ ಸುತ್ತುವ ಮೂಲಕ ದ್ರೌಪದಿ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಆ ಒಂದು ಐತಿಹಾಸಿಕ ಕರಗವನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾಯ್ತಿದ್ದಾರೆ.
ಕರಗದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರೋದೇ ಹೂವಿನ ಕರಗ, ಸಂಜೆ ಪೂಜಾರಿ ಹೆಣ್ಣಿನಂತೆ ಸೀರೆಯುಟ್ಟು, ಮಾಂಗಲ್ಯ ಧರಿಸಿ, ಕೈಗಳಿಗೆ ಬಳೆ ತೊಟ್ಟು, ಅರಿಶಿಣ, ಕುಂಕುಮವನಿಟ್ಟುಕೊಳ್ಳುತ್ತಾರೆ. ರಾತ್ರಿ ಸಂಪಂಗಿ ಕೆರೆಯ ಬಳಿ ಎಲ್ಲರೂ ಸೇರುತ್ತಾರೆ. ಪೂಜಾರಿಯು ಅಚ್ಚಮಲ್ಲಿಗೆ, ಜಡೆಕುಚ್ಚು, ಹೂವಿನ ಹಾರ ಹರಿಶಿನ ಬಣ್ಣದ ಸೀರೆಯುಟ್ಟು ಒಡವೆಗಳನ್ನು ಧರಿಸಿ ಮಧುಮಗಳಂತೆ ಸಿದ್ದವಾಗುತ್ತಾರೆ. ಕರಗ ಹೊರುವವರ ಕೈಯಲ್ಲಿ ಒಂದು ಬಾಕು ಅಂದ್ರೆ ಪುಟ್ಟ ಕತ್ತಿ ಮತ್ತೊಂದು ಬೆತ್ತ ಅಂದ್ರೆ ಕೋಲನ್ನ ಹಿಡಿದು ತಾಯಿ ಚಲಿಸುತ್ತಾಳೆ.. ವೀರಕುಮಾರರಿಂದ ಪೂಜೆಯಾದ ನಂತರ ಕರಗ ಹೊರುವ ಪೂಜಾರಿಯ ಮುಖದಲ್ಲಿ ಆದಿಶಕ್ತಿ ಅವಾಹನಳಾಗುತ್ತಾಳೆ. ಗಂಟೆಯ ಸದ್ದಿನೊಂದಿಗೆ ಗರ್ಭಗುಡಿ ಪ್ರವೇಶಿಸಲಾಗುತ್ತೆ. ಬಳಿಕ ಕರಗವನ್ನು ಮಲ್ಲಿಗೆ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿದ ನಂತರ ಮೆರವಣಿಗೆ ಆರಂಭವಾಗುತ್ತದೆ.
ಕರಗ ಬೆಂಗಳೂರಿನ ಅನೇಕ ಕಡೆಗಳಲ್ಲಿ ಸಾಗಿ ಬರುತ್ತೆ. ಸುಮಾರು 10 ರಿಂದ 15 ಕಿಲೋ ಮೀಟರ್ ವರೆಗೂ ಸುತ್ತಿ ಮುಂಜಾನೆ 6 ಗಂಟೆಯೊಳಗೆ ದೇವಸ್ಥಾನಕ್ಕೆ ಬಂದು ಸೇರುತ್ತೆ. ಇನ್ನು ಬೆಂಗಳೂರು ಕರಗದ ಮತ್ತೊಂದು ವಿಶೇಷತೆ ಏನಪ್ಪ ಅಂದ್ರೆ ಅರಳೆಪೇಟೆಯ ಮಸ್ತಾನ್ ಸಾಹೇಬ ದರ್ಗಾದಲ್ಲಿಯೂ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಕರಗವು ಸೂರ್ಯೋದಯಕ್ಕೂ ಮುನ್ನ ಅಂದರೆ ಬೆಳಗ್ಗೆ 6 ಗಂಟೆಯೊಳಗೆ ದೇವಸ್ಥಾನವನ್ನು ಸೇರಬೇಕು. ಅದರಂತೆ ಬಂದು ಸೇರುತ್ತೆ. ಈ ಕರಗ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿಯಾಗೋ ನಿರೀಕ್ಷೆ ಇದೆ.
