ಬಿಜೆಪಿ ಸರ್ಕಾರದ ವೇಳೆ 40% ಕಮಿಷನ್ ಆರೋಪ.. ರಾಜ್ಯ ಸಚಿವ ಸಂಪುಟದಿಂದ ಮಹತ್ವದ ನಿರ್ಧಾರ
1 min read
ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ತನಿಖೆ ಮಾಡಲು ಎಸ್ಐಟಿ ರಚನೆ ಮಾಡುವುದಾಗಿ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಅವರು ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ 40% ಕಮಿಷನ್ ಆರೋಪ ಕುರಿತು ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡಲಾಗಿತ್ತು. ಸದ್ಯ ನಾಗಮೋಹನ್ ದಾಸ್ ಅವರು ವಿಚಾರಣಾ ವರದಿ ಸಲ್ಲಿಸಿದ್ದರು. ಇದನ್ನು ಸಚಿವ ಸಂಪುಟದಲ್ಲಿ ಮಂಡಿಸಲಾಗಿದ್ದು ಕೆಲವು ಅಂಶಗಳನ್ನು ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. 21 ವಿಷಯಗಳ ಮೇಲೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು
ಈ ಬಗ್ಗೆ ಇನ್ನಷ್ಟು ವಿವರವಾದ ಚರ್ಚೆಯ ಅಗತ್ಯವಿದೆ. ದೂರುಗಳ ಮಾಹಿತಿ ಕಲೆ ಹಾಕಿ ವಿಶೇಷ ಶಿಫಾರಸುಗಳನ್ನು ಆಯೋಗ ನೀಡಿದೆ. 3 ಲಕ್ಷ ಕಾಮಗಾರಿಗಳಲ್ಲಿ 1,729 ಕಾಮಗಾರಿಗಳ ಬಗ್ಗೆ ವಿವರವಾದ ಆಪಾದನೆಗಳಿವೆ. ಯೋಜನೆ, ಹಣ ಬಿಡುಗಡೆ, ಎಲ್ಓಸಿ ಬಿಡುಗಡೆ ಸರಿಯಾದ ರೀತಿಯಲ್ಲಿ ಮಾಡಿಲ್ಲ ಎಂಬುದು ವರದಿಯಿಂದ ಗೊತ್ತಾಗಿತ್ತದೆ ಎಂದು ಹೇಳಿದ್ದಾರೆ. ಸಚಿವ ಸಂಪುಟ ಗಂಭೀರವಾಗಿ ಇದನ್ನೆಲ್ಲಾ ಪರಿಗಣಿಸಿ ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳಾಗಿವೆ ಎಂಬುದನ್ನು ಚರ್ಚಿಸಿದೆ. ಅನುದಾನಕ್ಕಿಂತ ಹೆಚ್ಚಿನ ಬಿಲ್ ರಿಲೀಸ್ ಆಗಿದೆ. ಕಾಮಗಾರಿಗಳ ಬಗ್ಗೆ ಕೆಲವು ಕಡೆ ಸಂಶಯಗಳಿವೆ. ಕೆಲವು ಕಡೆ ಟೆಂಡರ್ ಹಂಚಿಕೆ ವೇಳೆಯೇ ಮಧ್ಯವರ್ತಿಗಳ ಕೆಲಸ ಆಗಿದೆ. ಈ ಎಲ್ಲ ಆಧಾರದ ಮೇಲೆ ಇದು ಗಂಭೀರವಾದ ವರದಿ ಆಗಿದ್ದರಿಂದ ರಾಜ್ಯ ಸಚಿವ ಸಂಪುಟ ಎಸ್ಐಟಿ ರಚನೆ ಮಾಡಲು ತೀರ್ಮಾನ ಮಾಡಿದೆ. ಈ 40% ಕಮಿಷನ್ ಕುರಿತು 2 ತಿಂಗಳಲ್ಲಿ ಕ್ರಮ ಕೈಗೊಳ್ಳಲು ಎಸ್ಐಟಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
