ಇಂದು ಕರ್ನಾಟಕದ ಪಾಲಿಗೆ ಮಹತ್ವದ ದಿನ.. ಜಾತಿ ಗಣತಿ ವರದಿ ಮಂಡನೆಗೆ ಮುಹೂರ್ತ ಫಿಕ್ಸ್..!
1 min read
ಇಂದು ಕರ್ನಾಟಕದ ಪಾಲಿಗೆ ಮಹತ್ವದ ದಿನ.. ಸಾಕಷ್ಟು ಪರ-ವಿರೋಧದ ನಡುವೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾತಿ ಗಣತಿಗೆ ಕೈ ಹಾಕಲು ಹೊರಟಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಮಂಡನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ದಿನ ಸಚಿವ ಸಂಪುಟ ಸಭೆಯತ್ತ ಇಡೀ ರಾಜ್ಯದ ಚಿತ್ತವೇ ನೆಟ್ಟಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಜಾತಿ ಗಣತಿ ವರದಿ ಜಾರಿ ಮಾಡುತ್ತೆ ಎಂಬ ಮತದಾರರಿಗೆ ಭರವಸೆ ನೀಡಿತ್ತು. ಆದ್ರೆ ಕೈಗೆ ಅಧಿಕಾರ ಸಿಕ್ಕು ಎರಡು ವರ್ಷವಾದ್ರೂ ವರದಿ ಜಾರಿಗೆ ಸರ್ಕಾರ ಮುಂದಾಗಿರಲಿಲ್ಲ.. ಆದ್ರೀಗ ಗುಜರಾತ್ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ಮುಚ್ಚಿದ ಲಕೋಟೆಯಲ್ಲಿರುವ ವರದಿಯನ್ನು ಸಂಪುಟದಲ್ಲಿ ಅಂಗೀಕರಿಸಲು ಕಾಂಗ್ರೆಸ್ ಸರ್ಕಾರ ತಯಾರಿ ನಡೆಸಿದೆ.
ಹೆಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರ ಏ.11ರಿಂದ ಮೇ 30ರವರೆಗೆ ಸಮೀಕ್ಷೆ ನಡೆಸಿತ್ತು. ಜಾತಿ ವಿವರವೂ ಒಳಗೊಂಡಂತೆ 54 ಮಾನದಂಡಗಳ ಅಧಾರದಲ್ಲಿ ಸಮೀಕ್ಷೆ ಮಾಡಿತ್ತು. ಆದ್ರೆ, ಕಾಂತರಾಜ ಆಯೋಗ ಅವಧಿ ಮುಕ್ತಾಯದಿಂದ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಹೀಗಾಗಿ ಕಾಂತರಾಜ್ ಸಮೀಕ್ಷೆಯ ದತ್ತಾಂಶ ಬಳಸಿಕೊಂಡು ಅಂತಿಮ ವರದಿ ಸಲ್ಲಿಕೆ ಮಾಡುವಂತೆ ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗಕ್ಕೆ 2023ರಲ್ಲಿ ಸರ್ಕಾರ ಪತ್ರ ಬರೆದಿತ್ತು. ಅದರಂತೆ 2015ರ ಸಮೀಕ್ಷೆಯ ಆಧಾರದ ಮೇಲೆ 2024ರ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ ಆಯ್ತು. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ 2024ರ ಫೆಬ್ರವರಿ 29ರಂದು ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ಮಾಡಿತ್ತು. ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ವರದಿಯ ಲಕೋಟೆಯನ್ನು ತೆರೆದು ಪರೀಶೀಲಿಸಲು ಅನುಮೋದನೆ ಕೋರಿ ಮಂಡನೆಗೆ ಪ್ರಸ್ತಾಪಿಸಲಾಗಿದೆ.
ಕಾಂಗ್ರೆಸ್ ಸರ್ಕಾರ ಜಾತಿಗಣತಿ, ಒಳಮೀಸಲಾತಿ ಜಾರಿಗೆ ತೆರಲು ಮುಂದಾಗ್ತಿದ್ದಂತೆ. ಅತ್ತ ಕೇಸರಿ ಪಾಳಯ ಫುಲ್ ಅಲರ್ಟ್ ಆಗಿದೆ. ರಾಜ್ಯ ಸರ್ಕಾರದ ನಡೆ ನೋಡಿಕೊಂಡು ಎಚ್ಚರಿಕೆ ಹೆಜ್ಜೆ ಇಡಲು ಪ್ಲಾನ್ ಮಾಡಿದೆ.ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯತ್ತ ಇಡೀ ರಾಜ್ಯದ ಚಿತ್ತ ನೆಟ್ಟಿದೆ. ಒಂದು ವೇಳೆ ವರದಿ ಮಂಡನೆಯಾದರೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಯಿದೆ. ಹೀಗಾಗಿ ಸಿದ್ದರಾಮಯ್ಯನವರ ಕ್ಯಾಬಿನೆಟ್ ಮೀಟಿಂಗ್ ಮೇಲೆ ಕೋಟ್ಯಂತರ ಕಣ್ಣುಗಳು ನೆಟ್ಟಿವೆ.
