ಇಂದು ವಕ್ಫ್ ತಿದ್ದುಪಡಿ ಮಸೂದೆ ಮಂಡನೆ.. ಬಿಲ್ ಪಾಸ್ ಆಗೋ ಮುಂಚೆಯೇ ಮುಸ್ಲಿಂ ಬಾಂಧವರಿಂದ ಭಾರೀ ಸಂಭ್ರಮಾಚರಣೆ
1 min read
ತೀವ್ರ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರು ಸದನದಲ್ಲಿ ತಿದ್ದುಪಡಿ ಬಿಲ್ ಮಂಡನೆ ಮಾಡಿದ್ದು, ಪ್ರತಿಪಕ್ಷ ಸದಸ್ಯರು ವಿರೋಧಿಸಿದ್ದಾರೆ. ಪರ, ವಿರೋಧದ ಮಧ್ಯೆ ಇಂದು ಲೋಕಸಭೆಯಲ್ಲಿ ಬಿಲ್ ಪಾಸ್ ಆಗೋ ದೃಢ ನಂಬಿಕೆಯಲ್ಲಿ ಕೇಂದ್ರ ಸರ್ಕಾರ ಇದೆ. ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಸಾಕಷ್ಟು ಚರ್ಚೆಗಳನ್ನ ಮಾಡಲಾಗಿದೆ. ಮಸೂದೆ ಬಗ್ಗೆ ಸುಮಾರು 9.7 ಲಕ್ಷ ಸಲಹೆಗಳನ್ನ ಪರಿಶೀಲಿಸಲಾಗಿದೆ. ವಿಪಕ್ಷ ನಾಯಕರು ವಕ್ಫ್ ಬಿಲ್ನಲ್ಲಿ ಇಲ್ಲದ ವಿಚಾರಗಳಿಂದ ಜನರ ಹಾದಿ ತಪ್ಪಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಕಿರಣ್ ರಿಜಿಜು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ಕೇಂದ್ರ ಸರ್ಕಾರ ಕೆಲವೊಂದು ಸ್ಪಷ್ಟನೆಯನ್ನು ನೀಡಿದೆ. ಅರ್ಟಿಕಲ್ 25, 26, 30ರ ಉಲ್ಲಂಘನೆ ಅಂತ ಹೇಳ್ತಿದ್ದಾರೆ. ಆದ್ರೆ ಯಾವುದೇ ಆರ್ಟಿಕಲ್ ಉಲ್ಲಂಘನೆ ಮಾಡಲಾಗಿಲ್ಲ. ವಕ್ಫ್ ಬೋರ್ಡ್ ಯಾವತ್ತೂ ವಕ್ಫ್ ಆಸ್ತಿ ನಿರ್ವಹಣೆ ಮಾಡಲ್ಲ. ಸರ್ಕಾರ ವಕ್ಫ್ ಆಸ್ತಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ವಕ್ಫ್ ಬೋರ್ಡ್ ಶಾಸನಬದ್ಧ ಸಮಿತಿ, ಧಾರ್ಮಿಕ ಸಮಿತಿ ಅಲ್ಲ. ಮಂದಿರದ ಆಸ್ತಿ ನಿರ್ವಹಣೆ ಸಮಿತಿಯದ್ದು, ಮಂದಿರದ್ದಲ್ಲ. ವಕ್ಫ್ ತಿದ್ದುಪಡಿ ಮಸೂದೆಯಿಂದ ಸಮುದಾಯಕ್ಕೆ ಧಕ್ಕೆಯಾಗಲ್ಲ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಲೋಕಸಭೆ ಸಂಖ್ಯಾಬಲ- 542
NDA- 293
INDIA – 233
ಬಹುಮತ – 272
ಇಂದು ಸುದೀರ್ಘ ಚರ್ಚೆ ಬಳಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮತಕ್ಕೆ ಹಾಕಲಾಗುತ್ತದೆ. ಲೋಕಸಭೆಯಲ್ಲಿ ತಿದ್ದುಪಡಿ ಬಿಲ್ ಅಂಗೀಕಾರವಾದ ಬಳಿಕ ರಾಜ್ಯಸಭೆಗೆ ಕಳುಹಿಸಲಾಗುತ್ತದೆ. ರಾಜ್ಯಸಭೆಯಲ್ಲೂ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಆದ್ರೆ ಈ ಕಾನೂನು ರಾಷ್ಟ್ಪಪತಿಗಳ ಅಂಗಳ ತಲುಪುತ್ತದೆ. ರಾಷ್ಟ್ರಪತಿಗಳು ಅಂಕಿತ ಹಾಕಿದ ಬಳಿಕ ಅಧಿಕೃತವಾಗಿ ವಕ್ಫ್ ತಿದ್ದುಪಡಿ ಮಸೂದೆ ಜಾರಿಯಾಗುತ್ತದೆ.
ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಕ್ಕೂ ಮುನ್ನವೇ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಮಧ್ಯಪ್ರದೇಶದ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಸಂಭ್ರಮಾಚರಣೆ ಮಾಡಿದ್ದಾರೆ. ಭೋಪಾಲ್‌ನಲ್ಲಿ ಸೇರಿದ್ದ ಮುಸ್ಲಿಂ ಸಮುದಾಯದ ಪುರುಷ ಮತ್ತು ಮಹಿಳೆಯರು ಪ್ರಧಾನಿ ಮೋದಿ ಫೋಟೋ ಹಿಡಿದುಕೊಂಡು ಸಂಭ್ರಮಿಸಿದ್ದಾರೆ. ಬಿಲ್ ಪಾಸ್ ಆಗೋ ಮುಂಚೆಯೇ ಗುಲಾಬಿ ಹೂ ಹಿಡಿದು ಮಸೂದೆಗೆ ಸ್ವಾಗತ ಕೋರಿದ್ದಾರೆ. ಮುಸ್ಲಿಂ ಮಹಿಳೆಯರ ಈ ಸಂಭ್ರಮಾಚರಣೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
