ಬೆಲೆ ಏರಿಕೆ, ಗೊಂದಲ, ಗದ್ದಲದ ನಡುವೆ ದೆಹಲಿಗೆ ಫ್ಲೈಟ್ ಬುಕ್ ಮಾಡಿದ ಸಿಎಂ, ಡಿಸಿಎಂ
1 min read
ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಕುರ್ಚಿ ಕಾದಾಟ ಸದ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಇದು ಯಾವಾಗ ಧಗದಗಿಸುತ್ತೋ ಗೊತ್ತಿಲ್ಲ. ಇದರ ಜೊತೆಗೆ ಸಚಿವ ಹನಿಟ್ರ್ಯಾಪ್ ಯತ್ನ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. ಈ ಗೊಂದಲ, ಗದ್ದಲದ ನಡುವೆ ಸಿಎಂ ಸಿದ್ದರಾಮಯ್ಯ ಬಹುದಿನದ ನಂತ್ರ ದೆಹಲಿಯ ಫ್ಲೈಟ್ ಹತ್ತಲಿದ್ದಾರೆ. ಜೊತೆ ಜೊತೆಯಲಿ ಅಂತ ಡಿಸಿಎಂ ಡಿಕೆಶಿ ಕೂಡ, ಸಿಎಂ ಜೊತೆಗೆ ಡೆಲ್ಲಿ ಫ್ಲೈಟ್ ಹತ್ತಲಿದ್ದು, ತೀವ್ರ ಕುತೂಹಲ ಮೂಡಿಸಿದೆ.ಇಂದಿನಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳಲಿರುವ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬಹಳ ದಿನಗಳ ಬಳಿಕ ಸಿಎಂ ಹೈಕಮಾಂಡ್ ಭೇಟಿಗೆ ತೆರಳುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ರನ್ನ ಭೇಟಿ ಮಾಡಲಿದ್ದಾರೆ.
ಹನಿಟ್ರ್ಯಾಪ್ ಹಂಗಾಮ ಮಧ್ಯೆ ಸಿಎಂ , ಡಿಸಿಎಂ, ಜೊತೆ ಜೊತೆಯಲಿ ಅಂತ ದೆಹಲಿ ಟೂರ್ ಹಮ್ಮಿಕೊಂಡಿದ್ದಾರೆ. ಮೊನ್ನೆಯಷ್ಟೇ ಹೈಕಮಾಂಡ್ ಭೇಟಿ ಮಾಡಿ ಸೀಟ್ಗೆ ಟವೆಲ್ ಹಾಸಿ ಬಂದ ಸಾಹುಕಾರ್ ಸತೀಶ್, ಹತ್ತಾರು ವಿಷಯದಲ್ಲಿ ಸೈಲೆಂಟ್ ಆಗಿಯೇ ದಾಳ ಉರುಳಿಸಿ ವಾಪಸ್ ಆಗಿದ್ದಾರೆ. ಅಧಿಕಾರ ಹಸ್ತಾಂತರ ಇಲ್ಲ, ಸಿದ್ದು ಇಳಿಯೋ ಹಾಗಿಲ್ಲ. ಕೆಪಿಸಿಸಿ ಸೀಟ್ ಖಾಲಿ ಮಾಡಿಸಿ ಅಷ್ಟೇ ಅಂತ ಹೈಕಮಾಂಡ್ ಮುಂದೆ ತಮ್ಮ ಮನದ ಮಾತು ಒಪ್ಪಿಸಿದ್ದಾರೆ. ಈ ಬೆನ್ನಲ್ಲೆ ಸಿಎಂ – ಡಿಸಿಎಂ ಡೆಲ್ಲಿ ವಿಹಾರಕ್ಕೆ ತೆರಳ್ತಿದ್ದು, ಮೂರು ದಿನಗಳ ಕಾಲ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ.
ಬಹಳ ದಿನಗಳ ಬಳಿಕ ಹೈಕಮಾಂಡ್ ಭೇಟಿಗೆ ತೆರಳುತ್ತಿರುವ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ರನ್ನ ಭೇಟಿ ಮಾಡಲಿದ್ದು, ಹಲವು ವಿಷ್ಯಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.ಉಭಯ ನಾಯಕರು ತಮ್ಮ ಪಕ್ಷದ ವರಿಷ್ಠರನ್ನ ಭೇಟಿಯಾಗಲಿದ್ದಾರೆ. ಈ ಭೇಟಿಯಲ್ಲಿ ಸಂಪುಟ ಪುನಾರಚನೆ ಕುರಿತಂತೆ ಚರ್ಚಿಸುವ ಸಾಧ್ಯತೆ ಇದೆ. ಇನ್ನು ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಗಾದಿ ಮತ್ತು ಖಾಲಿ ಆಗ್ತಿರುವ ಎಂಎಲ್‌ಸಿ ನಾಮನಿರ್ದೇಶನದ ಬಗ್ಗೆ ವರಿಷ್ಠರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದಷ್ಟಕ್ಕೆ ಸೀಮಿತ ಆಗಲ್ಲ ಅನಿಸುತ್ತೆ.. ಸಚಿವ ರಾಜಣ್ಣ ಹನಿಟ್ರ್ಯಾಪ್, ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಬಿದ್ದ ಹೊಡೆತ, ಎಂಎಲ್ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕುರಿತು ಸಿಎಂ ಮಾಹಿತಿ ನೀಡ್ತಾರೆ ಎನ್ನಲಾಗಿದೆ.
