ಸಿದ್ದು ಸರ್ಕಾರ ಉಸಿರಾಡುವ ಗಾಳಿ ಬಿಟ್ಟು ಎಲ್ಲದಕ್ಕೂ ಟ್ಯಾಕ್ಸ್.. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸಿಡಿದೆದ್ದ ಕೇಸರಿಸೇನೆ
1 min read
ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಸೆಸ್ ಹೆಚ್ಚಿಸಿದ್ದು ಮಧ್ಯರಾತ್ರಿಯಿಂದಲೇ ದರ ಏರಿಕೆ ಶಾಕ್ ಕೊಟ್ಟಿದೆ. ಬೆಲೆ ಏರಿಕೆ ವಿರುದ್ಧ ಸಮರ ಸಾರಿರೋ ಬಿಜೆಪಿ ಇಂದಿನಿಂದ ರಾಜ್ಯಾದ್ಯಂತ ಹೋರಾಟಕ್ಕೆ ಕಹಳೆ ಮೊಳಗಿಸಿದೆ.ಡೀಸೆಲ್ ಮೇಲಿನ ಸೆಸ್ ದರ ಶೇ.2.73ರಷ್ಟು ಹೆಚ್ಚಿಸಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.. ಇದರ ಪರಿಣಾಮ ಇಂದು ಮಧ್ಯರಾತ್ರಿಯಿಂದಲೇ ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಹೆಚ್ಚಳವಾಗಿದೆ. 89.02 ರೂಪಾಯಿ ಇದ್ದ ಡೀಸೆಲ್ ದರ 91.02 ರೂಪಾಯಿಗೆ ಜಂಪ್ ಆಗಿದೆ. ಈ ಹಿಂದೆ ಶೇ 18.44ರಷ್ಟು ಇದ್ದ ತೆರಿಗೆ, ಇದೀಗ ಶೇಕಡ 21.17ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಬೆಂಗಳೂರಲ್ಲಿ ಡೀಸೆಲ್ 88.99 ರೂಪಾಯಿಗೆ ಮಾರಾಟವಾಗ್ತಿದೆ. ರಾಜ್ಯ ಸರ್ಕಾರ ಕಳೆದ ವರ್ಷವೂ ಪೆಟ್ರೋಲ್-ಡೀಸೆಲ್ ದರ ಏರಿಕೆ ಮಾಡಿತ್ತು. ತೆರಿಗೆ ದರ ಹೆಚ್ಚಳದ ಕಾರಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂಪಾಯಿ ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿತ್ತು.
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಾಜ್ಯ ಕೇಸರಿಸೇನೆ ಸಿಡಿದೆದ್ದಿದೆ. ಇಂದಿನಿಂದ ರಾಜ್ಯಾದ್ಯಂತ ಹೋರಾಟಕ್ಕೆ ಕಹಳೆ ಮೊಳಗಿಸಿದೆ. ಇವತ್ತು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಏಪ್ರಿಲ್ 5ರಂದು ವಿವಿಧ ಜಿಲ್ಲೆಗಳು ಹಾಗೂ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಿದೆ.. ಏಪ್ರಿಲ್ 7ರಂದು ಜನಾಕ್ರೋಶ ಯಾತ್ರೆ ಕೂಡ ಆಯೋಜಿಸಿದೆ.ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುತ್ತೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಬೆಲೆ ಏರಿಕೆ ಗ್ಯಾರಂಟಿಯನ್ನು ದಯಪಾಲಿಸಿದ್ದಾರೆ. ಏಪ್ರಿಲ್ 2 ರಂದು ಅಹೋರಾತ್ರಿ ಧರಣಿ ಮಾಡುತ್ತೇವೆ. ಬಿಜೆಪಿಯಿಂದ ಎಲ್ಲಾ ನಾಯಕರೂ ಬರುತ್ತಿದ್ದಾರೆ. ಸಿದ್ದರಾಮಯ್ಯರ ಸರ್ಕಾರ ಮನುಷ್ಯರು ಸೇವಿಸುವ ಗಾಳಿಗೆ ಟ್ಯಾಕ್ಸ್ ಹಾಕಿಲ್ಲ ಬಿಟ್ಟರೆ, ಉಳಿದ ಎಲ್ಲ ಪದಾರ್ಥಗಳಿಗೂ ಟ್ಯಾಕ್ಸ್ ಹಾಕುತ್ತಿದೆ -ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಗ್ಯಾರಂಟಿ ಬೆಲೆ ಏರಿಕೆ ಅಂತಿರೋ ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕೆಂಡ ಉಗುಳಿದ್ದಾರೆ.. ಟ್ವೀಟಾಸ್ತ್ರ ಪ್ರಯೋಗಿಸಿರೋ ದಳಪತಿ ಇದು ‘ದರ ಬೀಜಾಸುರ’ ಸರ್ಕಾರ ಅಂತ ಕುಟುಕಿದ್ದಾರೆ.. ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಜನಸಾಮಾನ್ಯರನ್ನು ಸುಲಿಗೆ ಮಾಡ್ತಿದೆ, ಜನ ದಂಗೆ ಎದ್ದು ಬೀದಿಗಿಳಿಯದೇ ವಿಧಿಯೇ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಇಂದಿನಿಂದ ಸಾಲು, ಸಾಲು ದರ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ. ಯುಗಾದಿಯ ಬೆಲ್ಲಕ್ಕಿಂತ ಬೆಲೆ ಏರಿಕೆಯ ಬೇವಿನ ಕಹಿ ಹೆಚ್ಚಾಗಿದೆ. ವರ್ಷ ತೊಡಕು ದಿನವೇ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗಲಿದೆ.
