ಟೀ ಮಾರಲು ಕಾಲೇಜು ಬಿಟ್ಟ ವಿದ್ಯಾರ್ಥಿ.. ವರ್ಷಕ್ಕೆ 5 ಕೋಟಿ ಹಣ ಸಂಪಾದನೆ ಮಾಡಿದ ಬೆಂಗಳೂರು ಹುಡುಗ
1 min read
ಆಗಿನಾ ಕಾಲದಿಂದಲೂ ವ್ಯಾಪಾರ ಎನ್ನುವುದಕ್ಕೆ ಯಾವುದೇ ಓದು, ಬರಹ ಬೇಕಿಲ್ಲ. ತಲೆಯಲ್ಲಿ ವ್ಯಾಪಾರದ ಒಳ್ಳೆಯ ನ್ಯಾಕ್ ಇದ್ದರೆ ಎಂಥಹ ಉದ್ಯಮಿಬೇಕಾದರೂ ಆಗಬಹುದು ಎಂದು ಜನರನ್ನ ನೋಡಿದ್ದೇವೆ, ಅವರ ಬಗ್ಗೆ ಕೇಳಿದ್ದೇವೆ, ಎಷ್ಟೋ ವ್ಯಾಪಾರಿಗಳು ಓದು ಬರಹ ಗೊತ್ತಿಲ್ಲದಿದ್ದರೂ ಚಿನ್ನ, ಬೆಳ್ಳಿ ದೊಡ್ಡ ದೊಡ್ಡ ಕಂಪನಿಗಳು , ಹೋಟೆಲ್ ಗಳನ್ನು ನಡೆಸಿಕೊಂಡಿದ್ದಾರೆ. ಆದರೆ ಇಲ್ಲಿ ಇದಕ್ಕೆ ವಿರುದ್ಧವಾದ ಸುದ್ದಿ ಇದ್ದು, ಉನ್ನತ ವ್ಯಾಸಂಗ ಮಾಡಲೆಂದು ವಿದೇಶಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಚಹಾ ಉದ್ಯಮದಲ್ಲಿ ಯಶಸ್ಸು ಗಳಿಸಿ, ಪ್ರಖ್ಯಾತಿ ಆಗಿದ್ದಾರೆ.
ಬೆಂಗಳೂರು ಮೂಲದ ಸಂಜೀತ್ ಕೊಂಡ 2018ರಲ್ಲಿ ತನಗೆ 18 ವರ್ಷ ವಯಸ್ಸು ಇರುವಾಗ ಉನ್ನತ ವ್ಯಾಸಂಗ ಮಾಡಲೆಂದು ಆಸ್ಟ್ರೇಲಿಯಾಕ್ಕೆ ಹೋಗಿದರು. ಆಸ್ಟ್ರೇಲಿಯಾದ ಲಾ ಟ್ರೋಬ್ ವಿಶ್ವವಿದ್ಯಾಲಯದ ಬೂಂದೋರಾ ಕ್ಯಾಂಪಸ್‌ನಲ್ಲಿ ಬ್ಯಾಚುಲರ್ ಆಫ್ ಬಿಸಿನೆಸ್ ಸ್ಟಡೀಸ್ ಅಧ್ಯಯನ ಮಾಡುತ್ತಿದ್ದರು. ವಿವಿಯಲ್ಲಿ 4 ಸೆಮಿಸ್ಟರ್ವರೆಗೆ ಸರಿಯಾಗಿ ಓದಿದ್ದ ಸಂಜೀತ್ಗೆ ಆ ಮೇಲೆ 5ನೇ ಸೆಮಿಸ್ಟರ್ನಲ್ಲಿ ಉದ್ಯೋಗಕ್ಕೆ ತರಗತಿಗಳು, ಪಠ್ಯಪುಸ್ತಕ, ಉಪನ್ಯಾಸಗಳು ಅವಶ್ಯಕವಲ್ಲ ಎನ್ನುವುದನ್ನ ಅರಿತುಕೊಂಡರು. ಚಹಾ ವ್ಯಾಪಾರದಿಂದ ಅವರ ಯಶಸ್ಸಿನ ಹಾದಿ ಆರಂಭವಾಯಿತು ಎನ್ನಬಹುದು.
ವಿಶ್ವವಿದ್ಯಾಲಯ ಬಿಟ್ಟು ಒಬ್ಬ ಅಂತರಾಷ್ಟ್ರೀಯ ಸ್ಟುಡೆಂಟ್ ಆಸ್ಟ್ರೇಲಿಯಾದಲ್ಲಿ ಜೀವನ ಸಾಗಿಸುವುದು ಅಷ್ಟು ಸುಲಭವಾಗಿರಲ್ಲ. ಆರ್ಥಿಕ ಹಾಗೂ ಇತರೆ ಸಮಸ್ಯೆಗಳು ತಲೆದೂರುತ್ತವೆ. ಆದರೆ ಇದನ್ನೆಲ್ಲಾ ಮೆಟ್ಟಿನಿಂತ ಸಂಜೀತ್ ಯಾರ ಸಹಾಯ ಪಡೆಯದೆ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಏಕಾಂಗಿಯಾಗಿ ಲೈಫ್ ಲೀಡ್ ಮಾಡಿದ. ಸೌದಿ ಅರೇಬಿಯಾದಲ್ಲಿ ತಂದೆ ಮೆಕಾನಿಕಲ್ ಇಂಜಿನಿಯರ್, ತಾಯಿ ಗೃಹಿಣಿ ಆಗಿದ್ದರೂ ಸಂಜೀತ್ ಸಹಾಯ ಪಡೆಯದೇ, ಹೋಟೆಲ್ನಲ್ಲಿ ಪಾತ್ರೆ ತೊಳೆಯುವುದರಿಂದ ಹಿಡಿದು, ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತ ತಮ್ಮ ಕೆಲಸದ ಕಡೆ ಸಾಗಿದರು. ಹಣ ಸಂಗ್ರಹ ಆದ ಮೇಲೆ 2021ರಲ್ಲಿ ತನ್ನ ಮೂವರು ಗೆಳೆಯರ ಜೊತೆ 18 ಲಕ್ಷ ರೂಪಾಯಿ ಬಂಡವಾಳ ಹೂಡಿ ಟೀ ಸ್ಟಾಲ್ ಅನ್ನು ಆರಂಭಿಸಿದರು. ಇದಕ್ಕೆ ಡ್ರಾಪ್ಔಟ್ ಚಾಯ್‌ವಾಲಾ ಎಂದು ನಾಮಕರಣ ಮಾಡಿದರು. ಆದರೆ ಟೀ ಸ್ಟಾಲ್ ಹೆಸರು ಅತಿ ಶೀಘ್ರದಲ್ಲೇ ಬ್ರ್ಯಾಂಡ್ ಆಗಿ ಹೆಸರು ಪಡೆಯಿತು. ಇದರಲ್ಲಿ ಮೊದಲು ಶುಂಠಿ ಚಹಾ, ಮಸಲಾ ಟೀ, ಲೆಮೆನ್ ಟೀ ಸೇರಿ 5 ವಿಧದ ಚಹಾ ಮಾತ್ರ ಮಾಡುತ್ತಿದ್ದರು. ನಂತರ ಚಹಾ ಜೊತೆ ಸಮೋಸಾ, ಸ್ಯಾಂಡ್‌ವಿಚ್‌ಗಳನ್ನು ಸೇರಿಸಿದರು. ಒಂದು ಕಪ್ ಚಹಾ, ಸಮೋಸಾ ಬೆಲೆ 270 ರೂಪಾಯಿ ನಿಗದಿ ಮಾಡಲಾಗಿತ್ತು ಎನ್ನಲಾಗಿದೆ.
2023 ಮಾರ್ಚ್ನಲ್ಲಿ ತನ್ನ ಚಹಾ ಬ್ಯುಸಿನೆಸ್ ವಿಸ್ತರಣೆ ಮಾಡಿದ ಸಂಜೀತ್, ಮೊಬೈಲ್ ಟೀ ಟ್ರಕ್ ಆರಂಭಿಸಿದರು. ವಿಶ್ವವಿದ್ಯಾಲಯ ಸೇರಿದಂತೆ ಇತರೆ ಕಾರ್ಯಕ್ರಮ, ಹಬ್ಬ ಹಾಗೂ ವಿವಾಹ ಸಮಾರಂಭಗಳಲ್ಲಿ ಮೊಬೈಲ್ ಟೀ ಟ್ರಕ್ನಿಂದ ಸಂಪಾದನೆ ಮಾಡತೊಡಗಿದರು. ಇದರ ನಂತರ ಲಾ ಟ್ರೋಬ್ ಸ್ಟ್ರೀಟ್‌ನಲ್ಲಿ ಹೊಸ ಅಂಗಡಿ ಮತ್ತು ಮೆಲ್ಬೋರ್ನ್‌ನ ಸದರ್ನ್ ಕ್ರಾಸ್ ಸ್ಟೇಷನ್‌ನಲ್ಲಿ ಒಂದು ಔಟ್‌ಲೆಟ್ ಪ್ರಾರಂಭಿಸಿದರು. ಸದ್ಯ ಈಗ ಸಂಜೀತ್ ಅಡಿ ಸಾಕಷ್ಟು ಕೆಲಸಗಾರರು ಇದ್ದಾರೆ. 2022ರಲ್ಲಿ ಮೂಲಗಳ ಪ್ರಕಾರ ಡ್ರಾಪ್ಔಟ್ ಚಾಯ್‌ವಾಲಾ, ವರ್ಷಕ್ಕೆ 5 ಕೋಟಿ 20 ಲಕ್ಷ ರೂಪಾಯಿ ಗಳಿಕೆ ಮಾಡುತ್ತಿದೆ. ನಿವ್ವಳ ಲಾಭವು ಒಟ್ಟು ಆದಾಯದ ಸರಿಸುಮಾರು 20% ಇದೆ. ಸಂಜೀತ್ ಅವರು ತಮ್ಮ ಕೆಲಸದ ಅನುಭವವನ್ನು, ತಮ್ಮ ತಾಯಿ ಅಂಗಡಿಗೆ ಭೇಟಿ ನೀಡಿ ಚಹಾ ಸವಿದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ.
