ಒಬ್ಬರು, ಇಬ್ಬರೂ ಅಲ್ಲ.. 48 ನಾಯಕರ ಹನಿಟ್ರ್ಯಾಪ್; ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ
1 min read
ರಾಜ್ಯದಲ್ಲಿ ಹನಿ ಟ್ರ್ಯಾಪ್ ಬಗ್ಗೆ ಕೇಳಿ ಬರುತ್ತಿದ್ದ ಗುಸು, ಗುಸು ಬಗ್ಗೆ ವಿಧಾನಸಭೆಯಲ್ಲಿ ಗಹನವಾದ ಚರ್ಚೆ ನಡೆದಿದೆ. ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪ ಮಾಡಿದರು. ನೇರವಾಗಿ ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ಹೇಳಿದರು. ಶಾಸಕ ಯತ್ನಾಳ್ ಅವರ ಪ್ರಸ್ತಾಪಕ್ಕೆ ಸಚಿವ ಕೆ.ಎನ್ ರಾಜಣ್ಣ ಅವರು ಉತ್ತರ ನೀಡಿದರು. ಯತ್ನಾಳ್ ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ನಾನು ವಾಸ್ತವವನ್ನು ಹೇಳುತ್ತೇನೆ. ಸಾರ್ವಜನಿಕವಾಗಿ ತಪ್ಪು ಮಾಹಿತಿ ಹೋಗಬಾರದು ಅಂತಾ ಹೇಳುತ್ತಿದ್ದೇನೆ.
ಕರ್ನಾಟಕ ರಾಜ್ಯ ಸಿಡಿಗೆ ಕಾರ್ಖಾನೆ ಅಂತಾ ಬಹಳ ಜನ ಹೇಳುತ್ತಾರೆ. ತುಮಕೂರಿನ ಇಬ್ಬರು ಪ್ರಭಾವಿ ಸಚಿವರಿಗೆ ಹನಿಟ್ರ್ಯಾಪ್ ಅನ್ನೋ ಸುದ್ದಿ ಬರ್ತಿದೆ. ಇದು ಕೇವಲ ಇಲ್ಲಿಗೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ನಾಯಕರ ಹನಿಟ್ರ್ಯಾಪ್ ಆಗಿದೆ. ನಾನು ಲಿಖಿತ ರೂಪದಲ್ಲಿ ದೂರು ಕೊಡುತ್ತೇನೆ. ಅದನ್ನ ಆಧರಿಸಿ ತನಿಖೆ ನಡೆಸಬೇಕು. ಸುಮಾರು 48 ರಾಜ್ಯ, ರಾಷ್ಟ್ರಮಟ್ಟದ ನಾಯಕರ ಹನಿಟ್ರ್ಯಾಪ್ ವಿಡಿಯೋಗಳಿವೆ ಅನ್ನೋ ಸ್ಫೋಟಕ ವಿಚಾರವನ್ನು ಸಚಿವ ಕೆ.ಎನ್ ರಾಜಣ್ಣ ಸದನದಲ್ಲಿ ಹೇಳಿದ್ದಾರೆ.
ಅಧ್ಯಕ್ಷರೇ ನನಗಿರೋ ಮಾಹಿತಿಯಂತೆ ಒಬ್ಬರು, ಇಬ್ಬರೂ ಇಲ್ಲ. ಇದು ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದರಲ್ಲಿ ಸಿಲುಕಿದ್ದಾರೆ. ತುಮಕೂರಿನ ಇಬ್ಬರು ಸಚಿವರು ಅಂತಾರೆ. ಇಲ್ಲಿ ನಾನು ಮತ್ತು ಗೃಹ ಸಚಿವ ಪರಮೇಶ್ವರ್ ಇಬ್ಬರು ತುಮಕೂರಿನ ಸಚಿವರು ಇದ್ದೇವೆ.ನಾನು ಗೃಹಮಂತ್ರಿಗಳಿಗೆ ದೂರು ಕೊಡ್ತೇನೆ. ಅವರು ಇದರ ಬಗ್ಗೆ ವಿಶೇಷ ತನಿಖೆ ಮಾಡಲಿ. ಹನಿಟ್ರ್ಯಾಪ್ ಹಿಂದೆ ಇರುವ ಪ್ರೊಡ್ಯೂಸರ್ ಯಾರು. ಡೈರೆಕ್ಟರ್ ಯಾರು ಇದ್ದಾರೆ ಅನ್ನೋದು ಹೊರಬರಲಿ. ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿರುವುದಕ್ಕೆ ಸಾಕ್ಷಿ, ಪುರಾವೆಗಳನ್ನ ಹಿಟ್ಕೊಂಡಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಹೀಗಾಗಬಾರದು. ಅವರು ಯಾರೇ ಇರಲಿ ಬಹಿರಂಗ ಆಗಲಿ. ವಾಸ್ತವ ಏನು ಎಂಬುದನ್ನ ಜನರಿಗೆ ಗೊತ್ತಾಗಬೇಕು. ಇದರ ತನಿಖೆಯನ್ನ ಮಾಡಿಸಬೇಕು ಎಂದು ಗೃಹ ಮಂತ್ರಿಗಳಿಗೆ ನಾನು ಒತ್ತಾಯಿಸ್ತೇನೆ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದರು.
