ಅನೈತಿಕ ಸಂಬಂಧ ಶಂಕೆ, ಪತಿಯಿಂದಲೇ ಪತ್ನಿಯ ಕೊಲೆ
1 min read
ಅನೈತಿಕ ಸಂಬಂಧದ ಬಗ್ಗೆ ಗಲಾಟೆ- ರಾತ್ರಿ ಹೊಡೆದು ಮಲಗಿದ್ದ ಗಂಡ ಬೆಳಗ್ಗೆ ಏಳುವಷ್ಟರಲ್ಲಿ ಪತ್ನಿ ಸಾವು!
ಆನೇಕಲ್: ಅನೈತಿಕ ಸಂಬಂಧದ ವಿಚಾರವಾಗಿ ಪತಿ ಪತ್ನಿಯ ನಡುವೆ ಗಲಾಟೆ ನಡೆದಿದ್ದು, ರಾತ್ರಿ ಪತಿ ಹೊಡೆದು ಮಲಗಿದ್ದು, ಬೆಳಗ್ಗೆ ಏಳುವಷ್ಟರಲ್ಲಿ ಪತ್ನಿಯ ಪ್ರಾಣ ಪಕ್ಷಿ ಹಾರಿ ಹೋಗಿರುವುದು ತಿಳಿದು ಬಂದಿದೆ.
ಈ ಘಟನೆ ಆನೇಕಲ್ ತಾಲೂಕಿನ ರಾಚಾಮಾನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಅನಿತಾ ಮೃತ ಗೃಹಿಣಿಯಾದರೆ ಬಾಬು ಪತ್ನಿಯನ್ನು ಹೊಡೆದು ಕೊಂದ ಗಂಡ. ಏಳು ವರ್ಷಗಳ ಹಿಂದೆ ಅನಿತಾ ಹಾಗೂ ಬಾಬು ಮದುವೆಯಾಗಿದ್ದರು. ಬಾಬು ಆನೇಕಲ್ ತಾಲೂಕಿನ ರಾಚಮಾನಹಳ್ಳಿ ಗ್ರಾಮದ ವಾಸಿಯಾದರೆ, ಅನಿತಾ ಮೂಲತಃ ಮೈಸೂರಿನ ಚಿಕ್ಕ ಮಾರ್ಕೆಟ್ ಏರಿಯಾದವರು. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ.
ಅನಿತಾ ಗಂಡನ ಜೊತೆ ಜಗಳ ಮಾಡಿಕೊಂಡು ಒಂದು ತಿಂಗಳು ಮನೆ ಬಿಟ್ಟಿದ್ದರು. ಕಳೆದ ವಾರ ಬಾಬು ಕುಟುಂಬಸ್ಥರು ಅನಿತಾ ಮನವೊಲಿಸಿ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದರು. ಆದರೆ ದಂಪತಿ ಇದೇ ವಿಚಾರವಾಗಿ ಪದೇ ಪದೇ ಜಗಳವಾಡುವುದನ್ನು ಮುಂದುವರಿಸಿಕೊಂಡು ಬಂದಿದ್ದರು.
ನಿನ್ನೆ ರಾತ್ರಿಯೂ ದಂಪತಿ ಜಗಳವಾಡಿದ್ದು, ಬಾಬು ಪತ್ನಿಗೆ ಹೊಡೆದಿದ್ದ. ನಂತರ ಹೋಗಿ ಮಲಗಿದ್ದ ಆತ ಬೆಳಗ್ಗೆ ಎದ್ದು ನೋಡುವಾಗ ಪತ್ನಿ ಮೃತಪಟ್ಟಿರುವುದು ತಿಳಿದು ಬಂದಿದೆ. ಇದೀಗ ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
