ಸುನಿತಾ ವಿಲಿಯಮ್ಸ್, ವಿಲ್ಮೋರ್ ಬರುವಿಕೆಗೆ ಕ್ಷಣಗಣನೆ..
1 min read
ಸುನಿತಾ ವಿಲಿಯಮ್ಸ್, ವಿಲ್ಮೋರ್ ಬರುವಿಕೆಗೆ ಇಡೀ ವಿಶ್ವವೇ ಈ ಕ್ಷಣಕ್ಕಾಗಿ ಕಾದು ಕುಳಿತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಅಲ್ಲೇ ಲಾಕ್ ಆಗಿರುವ ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ಆಗಮಿಸುವ ಕ್ಷಣ ಸನ್ನಿಹಿತವಾಗಿದೆ. ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆ ಆರಂಭವಾಗಿದೆ. ಗಗನಯಾತ್ರಿಗಳು ಇಂದು ಅಮೆರಿಕಕ್ಕೆ ಬಂದಿಳಿದರೆ ಭಾರತ ಇದನ್ನು ಕಾಣಲು ನಾಳೆ ಬೆಳಗ್ಗೆವರೆಗೆ ಕಾಯಬೇಕಿದೆ. ಅಮೆರಿಕ ಕಾಲಮಾನದಂತೆ ಇಂದು ಸಂಜೆ 5:57ಕ್ಕೆ ಭೂಮಿಗೆ ಬಂದಿಳಿಯಲಿದ್ದಾರೆ.
ಇದು ಭಾರತೀಯ ಕಾಲಮಾನಕ್ಕೆ ಹೋಲಿಸಿದರೆ 9 ಗಂಟೆ ವ್ಯತ್ಯಾಸವಿದೆ. ಅಂದರೆ ಬುಧವಾರ ಬೆಳಗಿನ ಜಾವ 3 ಗಂಟೆ 27 ನಿಮಿಷಕ್ಕೆ ಬರಲಿದ್ದಾರೆ. NASA ನೀಡಿರುವ ಮಾಹಿತಿ ಪ್ರಕಾರ ಅಮೆರಿಕದ ಫ್ಲೋರಿಡಾ ಕರಾವಳಿಯಲ್ಲಿ ಬಂದಿಳಿಯಲಿದ್ದಾರೆ. ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಕರೆತರುತ್ತಿರುವ ರೋಚಕ ಕಾರ್ಯಚರಣೆಯನ್ನು ನೀವು ಕೂಡ ಕಣ್ತುಂಬಿಕೊಳ್ಳಬಹುದು. NASA ತನ್ನ ವೆಬ್ಸೈಟ್ನಲ್ಲಿ ನೇರ ಪ್ರಸಾರ ಮಾಡಲಿದೆ.
ಜೂನ್ 5, 2024 ರಂದು ಕೇವಲ ಎಂಟು ದಿನದ ಅದ್ಯಯನಕ್ಕೆಂದು ಬಾಹ್ಯಾಕಾಶಕ್ಕೆ ತೆರಳಿದ್ದ ವಿಲಿಯಮ್ಸ್ ಹಾಗೂ ವಿಲ್ಮೋರ್ ಅಲ್ಲಿಯೇ ಸಿಲುಕಿಕೊಂಡಿದ್ದರು. ಬೋಯಿಂಗ್ ಸ್ಟಾರ್ಲೈನರ್ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಬಾಹ್ಯಾಕಾಶದಲ್ಲೇ ಇರಬೇಕಾದ ಪರಿಸ್ಥಿತಿ ಬಂದಿತ್ತು. ಇದೀಗ ಕೋಟಿ ಕೋಟಿ ಜನರ ಪ್ರಾರ್ಥನೆ ಹಾಗೂ ವಿಜ್ಞಾನಿಗಳ ಶ್ರಮದ ಫಲವಾಗಿ ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ವಾಪಸ್ಸಾಗುತ್ತಿದ್ದಾರೆ.
