UKG, 1ನೇ ತರಗತಿ ಓದುತ್ತಿದ್ದ ಇಬ್ಬರು ಮಕ್ಕಳನ್ನು ಬಕೆಟ್ ನೀರಲ್ಲಿ ಮುಳುಗಿಸಿ ಕೊಂದ ತಂದೆ!
1 min read

UKG ಮತ್ತು 1ನೇ ತರಗತಿ ಓದುತ್ತಿದ್ದ ಮಕ್ಕಳು ಸರಿಯಾಗಿ ಓದುತ್ತಿಲ್ಲ ಎಂದು ತಂದೆಯೇ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಈ ಘನ ಘೋರ ದುರಂತ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ. ಪಶ್ಚಿಮ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೇನಿ ಮೂಲದ ವನಪಲ್ಲಿ ಚಂದ್ರಕಿಶೋರ್ ಈ ದುರಂತಕ್ಕೆ ಕಾರಣವಾದ ಅಪ್ಪ. ಚಂದ್ರಕಿಶೋರ್ ಗೋದಾವರಿಯ ONGC ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರನಾಗಿ ಕೆಲಸ ಮಾಡುತ್ತಿದ್ದ.
ಚಂದ್ರಕಿಶೋರ್ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ತನುಜಾ, 7 ವರ್ಷದ ಮಗ ಜೋಶಿಲ್, 6 ವರ್ಷದ ಮತ್ತೊಬ್ಬ ಮಗ ನಿಖಿಲ್ ಇದ್ದರು. 7 ವರ್ಷದ ಜೋಶಿಲ್ 1ನೇ ತರಗತಿ ಮತ್ತು 6 ವರ್ಷದ ನಿಖಿಲ್ UKG ಓದುತ್ತಿದ್ದ. ಚಂದ್ರಕಿಶೋರ್, ತನ್ನ ಇಬ್ಬರು ಮಕ್ಕಳ ಬಗ್ಗೆ ಅತಿಯಾದ ಕನಸು ಕಂಡಿದ್ದ. ಪ್ರತಿ ಬಾರಿ ಅವರು ಪರೀಕ್ಷೆಯಲ್ಲಿ ಪಡೆಯುತ್ತಿದ್ದ ಮಾರ್ಕ್ಸ್ ಕಂಡು ಬಹಳಷ್ಟು ಅಸಮಾಧಾನಗೊಂಡಿದ್ದ. ಈ ಬಗ್ಗೆ ಹಲವು ಬಾರಿ ಮನೆಯಲ್ಲಿ ಗಲಾಟೆ ಕೂಡ ನಡೆದಿದೆ.
ಚಂದ್ರಕಿಶೋರ್ ನಿನ್ನೆ ಹೋಳಿ ಹಬ್ಬದ ದಿನ ತಮ್ಮ ಪತ್ನಿ ತನುಜಾ ಮತ್ತು ಇಬ್ಬರು ಪುತ್ರರಾದ ಜೋಶಿಲ್ ಮತ್ತು ನಿಖಿಲ್ ಅವರೊಂದಿಗೆ ತಮ್ಮ ಕಚೇರಿಗೆ ಹೋಗಿದ್ದರು. ನಂತರ ಮಕ್ಕಳನ್ನು ಸಮವಸ್ತ್ರದ ಅಳತೆಗಳನ್ನು ತೆಗೆದುಕೊಳ್ಳಲು ಟೈಲರ್ ಬಳಿ ಕರೆದೊಯ್ಯುತ್ತಿರುವುದಾಗಿ ಪತ್ನಿಗೆ ತಿಳಿಸಿ ಕಚೇರಿಯಲ್ಲಿಯೇ ಇರಲು ಮನವೊಲಿಸಿದ್ದಾನೆ. ಟೈಲರ್ ಬಳಿ ಹೋಗದ ಚಂದ್ರಕಿಶೋರ್ ಇಬ್ಬರು ಮಕ್ಕಳನ್ನು ನೇರ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿದ್ದ ಬಕೆಟ್ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ.
1ನೇ ತರಗತಿ, UKG ಓದುತ್ತಿದ್ದ ಮಕ್ಕಳು ಓದಿನಲ್ಲಿ ತುಂಬಾ ಹಿಂದುಳಿದಿದ್ದು ಚಂದ್ರಕಿಶೋರ್ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದ ತಂದೆ ಮಕ್ಕಳಿಬ್ಬರ ಕೈಕಾಲುಗಳನ್ನು ಕಟ್ಟಿ, ತಲೆಯನ್ನು ನೀರು ತುಂಬಿದ ಬಕೆಟ್‌ಗಳಲ್ಲಿ ಮುಳುಗಿಸಿ ಕೊಂದಿದ್ದಾನೆ. ಬಳಿಕ ತಾನೂ ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಮಕ್ಕಳು ಸರಿಯಾಗಿ ಓದುತ್ತಿಲ್ಲ. ಇವರಿಗೆ ಭವಿಷ್ಯವಿಲ್ಲ ಎಂದು ಚಂದ್ರಕಿಶೋರ್ ತನ್ನ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ. ಕೇವಲ 1ನೇ ತರಗತಿ, UKG ಓದುತ್ತಿದ್ದ ಮಕ್ಕಳು ಸರಿಯಾಗಿ ಓದುತ್ತಿಲ್ಲ ಅನ್ನೋ ಕಾರಣ ಈ ದುರಂತ ನಡೆದಿರೋದು ಭಯಾನಕವಾಗಿದೆ.
![]()

