ಅಪ್ಪ-ಅಮ್ಮನ ಚೆನ್ನಾಗಿ ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಇಲ್ಲ – ಕೃಷ್ಣ ಬೈರೇಗೌಡ
1 min read
ನಿನ್ನೆ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಬಲ್ಕಿಸ್ ಬಾನು, ಮಕ್ಕಳು ತಂದೆ-ತಾಯಿಗಳನ್ನು ಆರೈಕೆ ಮಾಡುತ್ತಿಲ್ಲ, ಅವರ ರಕ್ಷಣೆಗೆ ಕಾನೂನು ತರಬೇಕು ಎಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಕಂದಾಯ ಸಚಿವ ಕೃಷ್ಣ ಬೈರೇಗೌಡ.. ತಂದೆ, ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ತಮ್ಮ ಆಸ್ತಿಯನ್ನು ವಿಲ್ ಅಥವಾ ದಾನ ಪತ್ರದ ಮೂಲಕ ನೀಡಿರುವುದನ್ನು ರದ್ದು ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಹೇಳಿದರು.
ಅದಕ್ಕಾಗಿ ಹೊಸ ಕಾನೂನಿನ ಅಗತ್ಯವಿಲ್ಲ. ಕೇಂದ್ರ ಸರ್ಕಾರ 2007ರಲ್ಲೇ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಜಾರಿಗೆ ತಂದಿದೆ. ಅದರ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ಮಾಸಿಕ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡಲು ನಿರ್ಲಕ್ಷಿಸಿದರೆ ಹಿರಿಯನಾಗರಿಕರು ಸೆಕ್ಷನ್ 9ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ದೂರು ಸಲ್ಲಿಸಬಹುದು. ದೂರು ಸಾಬೀತಾದರೆ, ಸೆಕ್ಷನ್ ೨೩ ರಂತೆ ಪೋಷಕರು ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೆ ಆಸ್ತಿ ಮರುಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇದೆ ಅಂತಾ ಪರಿಷತ್ಗೆ ಮಾಹಿತಿ ನೀಡಿದರು.
