ರಾಜ್ಯಾದ್ಯಂತ ನೆತ್ತಿ ಸುಡುವ ಬಿಸಿಲು.. ಎಲ್ರೂ ಎಚ್ಚರದಿಂದ ಇರಲೇಬೇಕು!

ಬೆಂಗಳೂರು: ಅಬ್ಬಾ.. ರಾಜ್ಯಾದ್ಯಂತ ನೆತ್ತಿ ಸುಡುವ ಬಿಸಿಲು ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ರಾಯಚೂರಿನಲ್ಲಂತೂ ಸುಡುತ್ತಿರುವ ರಣ ಬಿಸಿಲಿಗೆ ಜನರು ಮನೆಯಿಂದ ಆಚೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ರಾಯಚೂರು ಮಾತ್ರವಲ್ಲ 6 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 41.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ರಾಜ್ಯದಲ್ಲೇ ಅತ್ಯಧಿಕ ಉಷ್ಣ ವಾತಾವರಣ. ಹೆಚ್ಚುತ್ತಿರುವ ಬಿಸಿಲಿನಿಂದ ರಾಯಚೂರು ಜನ ಕಂಗಾಲಾಗಿದ್ದಾರೆ.
ಬೆಂಗಳೂರಲ್ಲಿ ಸರಾಸರಿ 34.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ವಿಜಯಪುರ, ರಾಯಚೂರು, ಬೆಳಗಾವಿ, ಗದಗ, ಕೊಪ್ಪಳ ಸೇರಿದಂತೆ ಹಲವೆಡೆ 37 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ, ಹಾವೇರಿ, ಧಾರವಾಡ ಸೇರಿದಂತೆ ಹಲವೆಡೆ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಗರಿಷ್ಠ ತಾಪಮಾನ 6 ಜಿಲ್ಲೆಗಳಲ್ಲಿ
ರಾಯಚೂರಿನ ಜೊತೆಗೆ ರಾಜ್ಯದ 6 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿಯನ್ನು ದಾಟಿದೆ. ಕೊಪ್ಪಳದಲ್ಲಿ 40.7 ಡಿ.ಸೆ, ಉತ್ತರ ಕನ್ನಡ ಮತ್ತು ಧಾರವಾಡದಲ್ಲಿ 40.5 ಡಿ.ಸೆ, ಕಲಬುರಗಿ 40.04 ಡಿ.ಸೆ ಹಾಗೂ ಬಾಗಲಕೋಟೆ 40.1 ಡಿ.ಸೆ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಈ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ವಾತಾವರಣದಲ್ಲಿ ಮಧ್ಯಾಹ್ನ 12ರಿಂದ 3ಗಂಟೆಯವರೆಗೆ ಕೆಲಸ ಮಾಡುವುದು ಸಿಕ್ಕಾಪಟ್ಟೆ ತ್ರಾಸವಾಗಿದೆ. ಮಿತಿ ಮೀರಿದ ಬಿಸಿಲಿಗೆ ತಲೆನೋವು, ವಾಂತಿ, ಒಣತ್ವಚೆ ಮತ್ತು ಆರೋಗ್ಯದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಆದಷ್ಟು ನೀರು ಮತ್ತು ಹಣ್ಣಿನ ಜ್ಯೂಸ್ ಸೇವಿಸುವುದು ಉತ್ತಮವಾಗಿದೆ.
![]()