ಅನ್ನಭಾಗ್ಯ ಯೋಜನೆ ಅಕ್ಕಿ ಇನ್ಮುಂದೆ ಕಳ್ಳತನ ಮಾಡಲಾಗಲ್ಲ..ಸಿದ್ದರಾಮಯ್ಯ ಕಠಿಣ ನಿರ್ಧಾರ..!
1 min read
ಬೆಂಗಳೂರು: ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 2025ರ ಮುಂಗಡ ಪತ್ರವನ್ನು ಮಂಡನೆ ಮಾಡುತ್ತಿದ್ದಾರೆ. ರಾಜ್ಯದ ಹಲವಾರು ಇಲಾಖೆಗೆಗಳಿಗೆ ಭರಪೂರ ಕೊಡುಗೆ ನೀಡಿದ್ದಾರೆ. ಗ್ಯಾರಂಟಿಗಳ ಮಧ್ಯೆಯು ಜನ ಪರವಾದ ಯೋಜನೆಗಳನ್ನು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹಣದ ಬದಲು ಈಗ ಅಕ್ಕಿ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಅಕ್ಕಿಯ ಕೊರತೆಯಿಂದ ರಾಜ್ಯ ಸರ್ಕಾರ ಇಷ್ಟು ದಿನ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹಣವನ್ನು ಮಾತ್ರ ಪಾವತಿ ಮಾಡುತ್ತಿತ್ತು. ಆದರೆ ಈಗ ಹಣದ ಬದಲಿಗೆ 5 ಕೆ.ಜಿ ಅಕ್ಕಿ ನೀಡಲಾಗುವುದು. ಇದರಿಂದ 4.21 ಕೋಟಿ ಫಲಾನುಭವಿಗಳು ಅಕ್ಕಿಯನ್ನು ಪಡೆಯಲಿದ್ದಾರೆ.
ಅಕ್ಕಿಯನ್ನು ಸಾಗಾಟ ಮಾಡುವಾಗ ಗೋದಾಮುಗಳಲ್ಲಿ, ವಾಹನಗಳಲ್ಲಿ ಕಳ್ಳಸಾಗಣೆ ಆಗುತ್ತಿರುವುದು ಮನಗಂಡಿರುವ ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದೆ. 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಗಟು ಗೋದಾಮುಗಳಿಗೆ ಸಿಸಿಟಿವಿ ಅಳವಡಿಸಲಾಗುತ್ತದೆ. ಇನ್ನು ಅಕ್ಕಿ ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಮಾಡಲಾಗುತ್ತದೆ. ಹಾಗೂ ಕಮಾಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯಗಳನ್ನು ತಲುಪಿಸಲು ಹಿಂದಿನ ವರ್ಷ ಅನ್ನ- ಸುವಿಧಾ ಯೋಜನೆ ಜಾರಿ ಮಾಡಿತ್ತು. ಈ ಯೋಜನೆಯನ್ನು 2 ಲಕ್ಷ ಫಲಾನುಭವಿಗಳು ಪಡೆಯುತ್ತಿದ್ದಾರೆ. 80 ವರ್ಷದಿಂದ 75 ವರ್ಷ ಮೇಲ್ಪಟ್ಟವರಿಗೂ ಇದನ್ನ ವಿಸ್ತರಿಸಲಾಗುವುದು. ಇದರಿಂದ 3.30 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಅಕ್ಕಿ ಸೇರಿ ಇತರೆ ವಸ್ತುಗಳು ಸರಿಯಾಗಿ ವಿತರಣೆ ಆಗುವಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಸ್ಥಾಪಿಸಿರುವ ಎಲೆಕ್ಟ್ರಾನಿಕ್ ವೈಟಿಂಗ್ ಮಿಷನ್ ಮತ್ತು ಪಾಯಿಂಟ್ ಆಫ್ ಸೇಲ್ ಸಿಸ್ಟಮ್ ಗಳನ್ನು ಸಾರ್ವಜನಿಕ ವಿತರಣಾ ಪದ್ಧತಿಯ ಐಟಿ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗುವುದು. ಅನ್ನಭಾಗ್ಯ ಯೋಜನೆಯ ಸಗಟು ಲಾಭಾಂಶವನ್ನು ಪ್ರತಿ ಕ್ವಿಂಟಾಲ್ಗೆ 35 ರೂಪಾಯಿ ಇಂದ 45 ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಯಲ್ಲಿ ತಿಳಿಸಿದ್ದಾರೆ.
