13 ವರ್ಷದ ಬಾಲಕನೊಬ್ಬ ಕೋಪದಲ್ಲಿ ತಂಗಿಯ ಜೀವವನ್ನೇ ತೆಗೆದ ಅಣ್ಣ!
1 min read
ಮುಂಬೈ: 13 ವರ್ಷದ ಬಾಲಕನೊಬ್ಬ ತನ್ನ 6 ವರ್ಷದ ಸೋದರ ಸಂಬಂಧಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಯೂ ಮಾರ್ಚ್ 1ರಂದು ನಲಾ ಸೋಪಾರದಲ್ಲಿ ನಡೆದಿದೆ. ಆರೋಪಿ ಸ್ಥಾನದಲ್ಲಿರೋ ಬಾಲಕನ ಪೋಷಕರು ತನ್ನ ಸೋದರ ಸಂಬಂಧಿಗೆ ಜಾಸ್ತಿ ಪ್ರೀತಿ ತೋರಿಸುತ್ತಿದ್ದರಂತೆ. ಹೀಗಾಗಿ ಇದೇ ಕೋಪದಲ್ಲಿ ಬಾಲಕ ಈ ಕೃತ್ಯ ಎಸಗಿದ್ದಾನಂತೆ. ಈ ಮೊದಲು ಅಣ್ಣ ಆಕೆಯನ್ನು ಬೆಟ್ಟದ ಮೇಲಿನ ಯಾರು ಇಲ್ಲದ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ.
ಪೊಲೀಸರ ಪ್ರಕಾರ, ಸೋದರ ಸಂಬಂಧಿಗಳ ಕುಟುಂಬಗಳು ಒಟ್ಟಿಗೆ ವಾಸಿಸುತ್ತಿದ್ದವು. ಸಂಜೆ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಕಾಣೆಯಾಗಿದ್ದಳು. ಆಗ ಕುಟುಂಬಸ್ಥರು ಆಕೆಯನ್ನು ಎಲ್ಲಾ ಕಡೆ ಹುಡುಕಾಡಿದ್ದಾರೆ. ಇದೇ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಬಾಲಕ ಬಾಲಕಿಯೊಂದಿಗೆ ಬೆಟ್ಟದ ಕಡೆಗೆ ಹೋಗುತ್ತಿರುವುದು ಕಂಡು ಬಂದಿದೆ. ಆದರೆ ಬಳಿಕ ವಾಪಸ್ ಬರುವಾಗ ಒಬ್ಬಂಟಿಯಾಗಿ ಹಿಂತಿರುಗಿದ್ದಾನೆ ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದುಕೊಂಡು ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ. ಜೊತೆಗೆ ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಆರಂಭದಲ್ಲಿ ಹುಡುಗ ತನ್ನ ಮೇಲೆ ಮತ್ತು ಹುಡುಗಿಯ ಮೇಲೆ ಇಬ್ಬರು ವ್ಯಕ್ತಿಗಳು ಗುಡ್ಡದ ಮೇಲೆ ಹಲ್ಲೆ ನಡೆಸಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರ ಮುಂದೆ ಹೇಳಿದ್ದಾನೆ. ಆದ್ರೆ ಅನುಮಾನಗೊಂಡ ಪೊಲೀಸರು ತೀವ್ರವಾಗಿ ವಿಚಾರಿಸಿದಾಗ ಬಾಲಕ ಸತ್ಯ ಬಾಯ್ಬಿಟ್ಟಿದ್ದಾನೆ. ಹುಡುಗಿಯ ಕತ್ತು ಹಿಸುಕಿ ನಂತರ ಕಲ್ಲಿನಿಂದ ಹೊಡೆದಿದ್ದೇನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
