ಸದ್ಯ ರಾಜ್ಯದಲ್ಲಿ ಹಕ್ಕಿ ಜ್ವರ ಹರಡುವ ಭೀತಿ..!
1 min read
ರಾಯಚೂರು : ಸದ್ಯ ಕರ್ನಾಟಕದಲ್ಲಿ ಹಕ್ಕಿ ಜ್ವರ ಸದ್ದು ಮಾಡುತ್ತಿದ್ದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಬೆಕ್ಕಿನಲ್ಲೂ ಈ ಜ್ವರ ಕಾಣಿಸಿರುವುದು ಇನ್ನಷ್ಟು ಭೀತಿ ಹುಟ್ಟಿಸಿದೆ. ಇದರ ಬೆನ್ನಲ್ಲೇ ತೆಲಂಗಾಣದಲ್ಲಿ ಕಾಣಿಸಿದ್ದ ಹಕ್ಕಿಜ್ವರ ಕರ್ನಾಟಕಕ್ಕೂ ವ್ಯಾಪಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಏಕೆಂದರೆ ರಾಯಚೂರಲ್ಲಿ ಪಕ್ಷಿಗಳು ನಿಗೂಢವಾಗಿ ಕಣ್ಮರೆಯಾಗುತ್ತಿವೆ. ನೆರೆ ರಾಜ್ಯ ತೆಲಂಗಾಣದಲ್ಲಿ ಈಗಾಗಲೇ ಕಾಣಿಸಿಕೊಂಡ ಹಕ್ಕಿ ಜ್ವರ ರಾಯಚೂರಿಗೂ ಹರಡಿರುವ ಶಂಕೆ ಇದೆ. ಮಾನ್ವಿ ತಾಲೂಕಿನ ಹಲವೆಡೆ ಪಕ್ಷಿಗಳು ನಿಗೂಢವಾಗಿ ಜೀವ ಬಿಡುತ್ತಿವೆ. ಮಕ್ಸೂದ್ ಅಲಿ ಎಂಬುವರ ತೋಟದಲ್ಲಿ 8 ರಿಂದ 10 ಪಕ್ಷಿಗಳ ಜೀವ ಕಳೆದುಕೊಂಡು ನೆಲಕ್ಕೆ ಬಿದ್ದಿವೆ. ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣ ಪಕ್ಷಿ (ರತ್ನ ಪಕ್ಷಿ) ಸೇರಿ ವಿವಿಧ ಪಕ್ಷಿಗಳು ಸಾವನ್ನಪ್ಪಿವೆ.
ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನ ಹಲವೆಡೆ ಪಕ್ಷಿಗಳ ನಿಧನ ಹೊಂದುತ್ತಿವೆ. ಮಾನ್ವಿ ಪಟ್ಟಣ, ರಬ್ಬಣಕಲ್ ಸೇರಿ ಹಲವೆಡೆ ಪಕ್ಷಿಗಳು ದಿನನಿತ್ಯ ಸಾಯುತ್ತಿವೆ. ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಕೆಲಹೊತ್ತಿನಲ್ಲಿ ಜೀವ ಬಿಡುತ್ತಿವೆ. ಅವು ನೆಲಕ್ಕೆ ಬೀಳುತ್ತಿದ್ದಂತೆ ನೀರನ್ನ ಕುಡಿಸಿದರೂ ಹಕ್ಕಿಗಳು ಕಣ್ಮುಚ್ಚುತ್ತಿರುವುದು ಆತಂಕ ತಂದಿದೆ.
