ದಲಿತ ಸಿಎಂಗೆ ಒತ್ತಾಯ ವಿಜಯಪುರದಲ್ಲಿ ದಲಿತ ಸಿಎಂ ಆಗಬೇಕು ಎಂದು ಒತ್ತಾಯ
1 min read
ವಿಜಯಪುರ : ರಾಜ್ಯದಲ್ಲಿ ಈವರೆಗೂ ಪರಿಶಿಷ್ಠ ಜನಾಂಗದ ಯಾವ ವ್ಯಕ್ತಿಯೂ ಯಾವುದೇ ಪಕ್ಷದಲ್ಲೂ ಮುಖ್ಯಮಂತ್ರಿ ಆಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಿದ್ದರೆ ದಲಿತ ನಾಯಕ ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ದಲಿತ ಮುಖಂಡ ಕಾಂಗ್ರೆಸ್ ಹಿರಿಯ ನಾಯಕ ಚಂದ್ರಶೇಖರ ಕೊಡಬಾಗಿ ಆಗ್ರಹಿಸಿದ್ದಾರೆ. ವಿಜಯಪುರ ನಗರದ ಜಿಲ್ಲಾ ಛಲವಾದಿ ಮಹಾಸಭಾ ಹಾಗೂ ಬುದ್ಧವಿಹಾರ ನಿರ್ಮಾಣ ಸಮಿತಿ ನೇತೃತ್ವದಲ್ಲಿ ಬುದ್ಧವಿಹಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಪಡೆದಿದ್ದರೂ ಪರಿಶಿಷ್ಠ ಸಮುದಾಯದ ನಾಯಕರಿಗೆ ಅವಕಾಶ ಸಿಕ್ಕಿಲ್ಲ. ಶೇಕಡಾ 90ರಷ್ಟು ಎಸ್ಸಿ ವರ್ಗದ ಜನರು ಕಾಂಗ್ರೆಸ್ ಪಕ್ಷದ ಆರಂಭದಿಂದಲೂ ಕಾಂಗ್ರೆಸ್ ಜೊತೆಗೆ ಇದ್ದಾರೆ. ಕೇವಲ ನಮ್ಮನ್ನು ವೋಟಿಗಾಗಿ ಉಪಯೋಗ ಮಾಡುತ್ತಿರುವುದು ದುರ್ದೈವದ ಸಂಗತಿ. ನಾವು ಇನ್ನುಮುಂದೆ ಅವಕಾಶ ಸಿಗದಿದ್ದರೆ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ಕೊಡುವ ಮೊದಲು ಚಿಂತಿಸಬೇಕಾಗುತ್ತದೆ.
ಎಸ್ಸಿ ಜನಾಂಗದ ಸರ್ವತೋಮುಖ ಅಭಿವೃದ್ಧಿ ಆಗಬೇಕು ಎಂದರೆ ಸಮಾಜದ ಪ್ರತಿನಿಧಿಯನ್ನು ರಾಜ್ಯ ಚುಕ್ಕಾಣಿ ಹಿಡಿಯುವಂತೆ ಮಾಡಬೇಕು. ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾಗಾಂಧಿ, ರಾಹುಲಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದರ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ರು. ಜಿ.ಪರಮೇಶ್ವರ ಅವರು ಎರಡು ಬಾರಿ ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2009ರಲ್ಲಿ ಖರ್ಗೆ ಅವರಿಗೆ ಅವಕಾಶ ಸಿಗಲಿಲ್ಲ. 2018 ರಲ್ಲೂ ಪರಮೇಶ್ವರಗೆ ಅವಕಾಶ ಕೊಡಲಿಲ್ಲ. 2023ರಲ್ಲಿ ಗೃಹಖಾತೆ ನೀಡಿ ಸಮಾಧಾನ ಮಾಡಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಹಾಗೂ ಎಐಸಿಸಿ ನಾಯಕರು ಈ ಬಾರಿ ಸಿಎಂ ಬದಲಾವಣೆ ಮಾಡುವುದಾದರೆ ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಬುದ್ಧವಿಹಾರ ನಿರ್ಮಾಣ ಸಮೀತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ, ಛಲವಾದಿ ಮಹಾಸಭಾದ ಅಧ್ಯಕ್ಷ ಸುನೀಲ ಉಕ್ಕಲಿ, ಮುಖಂಡರಾದ ವೈ.ಹೆಚ್.ವಿಜಯಕರ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ಲ ಸೇರಿದಂತೆ ಹಲವರಿದ್ದರು…
