ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಇವತ್ತು ವಿಶೇಷ ಪೂಜೆ
1 min read
ಕಲಬುರಗಿ : ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಆಳಂದ ಪಟ್ಟದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಇಂದು ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಇದರಿಂದ ಹಿಂದೂಗಳು ಪೂಜೆಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಆಳಂದ ಪಟ್ಟಣದಲ್ಲಿ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಮಹಾ ಶಿವರಾತ್ರಿ ಇರುವುದರಿಂದ ದರ್ಗಾದ ಒಳಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕಲಬುರಗಿಯ ಹಿಂದೂ ಸಂಘಟನೆಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದವು. ಇದನ್ನು ವಿಚಾರಣೆ ಮಾಡಿದ ಹೈಕೋರ್ಟ್ ಸಕಾರಾತ್ಮಕವಾಗಿ ಸ್ಪಂದಿಸಿ ಶಿವರಾತ್ರಿಗಾಗಿ ಪೂಜೆಗೆ ಅನುಮತಿ ನೀಡಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ವರೆಗೆ 15 ಜನ ಹಿಂದೂಗಳು ಪೂಜೆ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ. ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದುಕೊಂಡ 15 ಮಂದಿ ಮಾತ್ರ ದೇವರಿಗೆ ಪೂಜೆ ಸಲ್ಲಿಕೆ ಮಾಡಬಹುದು. ಸಾರ್ವಜನಿಕರಿಗೆ ದರ್ಗಾದ ಒಳಗೆ ಹೋಗುವಂತಿಲ್ಲ. ಪೂಜೆ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ನಿಯೋಜಿಸಲಾಗಿದೆ.
ದರ್ಗಾದ ಒಳಗಿರುವ ಶಿವನಿಗೆ ಪೂಜೆಗೆ ಯಾರು ಯಾರು ತೆರಳುತ್ತಾರೆ ಎನ್ನುವ ಪಟ್ಟಿಯನ್ನು ಅರ್ಜಿದಾರ ಸಿದ್ರಾಮಯ್ಯ ಹಿರೇಮಠ ಅವರು ಸಿದ್ಧಪಡಿಸಲಿದ್ದಾರೆ. ಪೂಜೆಗೆ ತೆರಳುವ 15 ಜನರ ಹೆಸರು, ಆಧಾರ ಕಾರ್ಡ್ ಪೊಲೀಸರಿಗೆ ಸಿದ್ರಾಮಯ್ಯ ಹಿರೇಮಠ ನೀಡಲಿದ್ದಾರೆ. ಆದರೆ, ಪೂಜೆಯಿಂದ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ನಿರ್ಬಂಧ ವಿಧಿಸಿದೆ. ವಕ್ಫ್ ಟ್ರಿಬ್ಯೂನಲ್ ಆದೇಶ ಹಿನ್ನೆಲೆ ಈ ಬಾರಿ ಸಿದ್ದಲಿಂಗ ಸ್ವಾಮೀಜಿಗೆ ಅವಕಾಶ ನಿರಾಕರಣೆ ಮಾಡಲಾಗಿದೆ.
ಹಿಂದೂಗಳು ಶಿವನಿಗೆ ಪೂಜೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯದವರನ್ನು ಕರೆದುಕೊಂಡು ಹೋಗಿ ಪೂಜೆ ಮಾಡುವ ಬದಲು ಭಕ್ತಿಯಿಂದ ಪೂಜೆ ಮಾಡುವ ಭಕ್ತರಿಂದ ಪೂಜೆ ಮಾಡಿ ಎಂದು ನ್ಯಾಯಾಲಯ ಸೂಚಿಸಿದೆ. ಹಿಂದೂಗಳು ಪೂಜೆ ಮಾತ್ರ ಸಲ್ಲಿಸಬೇಕು. ಪೂಜೆಯ ಹೊರತುಪಡಿಸಿ ಬೇರೆ ಯಾವುದೇ ಇತರೆ ಕೆಲಸ ಮಾಡದಂತೆ ಕೋರ್ಟ್ ಸೂಚಿಸಿದೆ. ಇನ್ನು ದರ್ಗಾದಲ್ಲಿನ ಶಿವಲಿಂಗದ ಸ್ಥಳದ ವಿಚಾರವಾಗಿ ಹೋರಾಟ ಮುಂದುವರೆಯಲಿದೆ.
