ಮಹಾಕುಂಭಮೇಳದಲ್ಲಿ ಭಾಗವಹಿಸಿ ನಾನು ಸಂತುಷ್ಟನಾಗಿದ್ದೇನೆ ಎಂದ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್

ಹುಬ್ಬಳ್ಳಿ : ರಾಜ್ಯ ಬಜೆಟ್ ಅಧಿವೇಶನ ಮಾ. 3ರಿಂದ 21ರವರೆಗೆ ನಡೆಯಲಿದೆ. ಆರಂಭದಲ್ಲಿ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ ಗೆಹಲೋತ್ ಮಾತನಾಡುವರು. 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವರು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚು ದಿನ ಅಧಿವೇಶನ ವಿಸ್ತರಿಸುವ ಕುರಿತು ಮೊದಲ ದಿನ ಆಡಳಿತ ಪ್ರತಿಪಕ್ಷ ಸೇರಿ ಬಿಜಿನೆಸ್ ಅಡ್ವೈಸರಿ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸುತ್ತೇವೆ ಎಂದರು. ಬೆಳಗಾವಿ ಅಧಿವೇಶನದಲ್ಲಿ ಬಹಳಷ್ಟು ಚರ್ಚೆಗಳು ಆಗಿವೆ. ಅನುಷ್ಠಾನ ಕುರಿತು ಪರಾಮರ್ಶೆ ಆಗುತ್ತವೆ. ಗದ್ದಲವೇ ಪ್ರಜಾಪ್ರಭುತ್ವದ ಸೌಂದರ್ಯ. ಗದ್ದಲ ಇಲ್ಲವೆಂದರೆ ಏನೂ ಪ್ರಯೋಜನವಿಲ್ಲವೆಂದರ್ಥ. ಹೆಚ್ಚು ದಿನ ವಿಸ್ತರಿಸುವ ಕುರಿತು ಸರ್ಕಾರ ನಿರ್ಧರಿಸುತ್ತದೆ. ನಾನು ಪ್ರತಿಪಕ್ಷದ ಮಿತ್ರ. ಅಧಿವೇಶನ ಚೆನ್ನಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನನ್ನದು ಎಂದರು.
ಅಧಿವೇಶನ ಪೂರ್ವದಲ್ಲಿ ಬೆಂಗಳೂರು ವಿಧಾನಸೌಧ ಆವರಣದಲ್ಲಿ ಫೆ. 27ರಿಂದ 3ರವರೆಗೆ ಪುಸ್ತಕ ಮೇಳ ನಡೆಯಲಿದೆ. ಎಲ್ಲರೂ ಭಾಗವಹಿಸಬೇಕು ಎಂದು ವಿನಂತಿಸಿದರು. ಮಹಾಕುಂಭಮೇಳಕ್ಕೆ ನಾನು ಹೋಗಿದ್ದೆ. ನಮ್ಮ ಧರ್ಮ, ದೇಶದ ಸಂಸ್ಕೃತಿ ನೋಡಲು ಅವಕಾಶ ಸಿಕ್ಕಿತು. 144 ವರ್ಷಕ್ಕೊಮ್ಮೆ ನಡೆಯುವ ಈ ಕುಂಭಮೇಳದಲ್ಲಿ ಭಾಗವಹಿಸಿ ಸಂತುಷ್ಟನಾಗಿದ್ದೇನೆ ಎಂದರು.
![]()