ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಸೆಸ್ಕಾಂ ಅಧಿಕಾರಿಗಳಿಗೆ ದಿಗ್ಬಂಧನ
1 min read
ಚಾಮರಾಜನಗರ : ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ನಲ್ಲೂರು ಗ್ರಾಮದಲ್ಲಿ ರೈತರು ಸೆಸ್ಕಾಂ ಅಧಿಕಾರಿಗಳನ್ನು ಗ್ರಾಮದಲ್ಲಿಯೆ ದಿಗ್ಬಂಧನ ಹಾಕಿದ ಘಟನೆ ಜರುಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಮಿಳುನಾಡು ಗಡಿಹಂಚಿನಲ್ಲಿರುವ ನೆಲ್ಲೂರು ಗ್ರಾಮದಲ್ಲಿನ ವಿದ್ಯುತ್ ಪರಿವರ್ತಕಕ್ಕೆ ಅಳವಡಿಸಿದ್ದ ಬೂಸ್ಟರ್ ಪದೆಪದೇ ಸುಟ್ಟುಹೋಗುತ್ತಿರುವ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸಮಸ್ಯೆಯಾಗುತ್ತಿದೆ. ಇದರಿಂದ ಜಮೀನುಗಳಲ್ಲಿ ಬೆಳೆದಿರುವ ಫಸಲನ್ನು ಉಳಿಸಿಕೊಳ್ಳಲು ಕಷ್ಟವಾಗಿದೆ ಎಂದು ಸೆಸ್ಕಾಂ ಅಧಿಕಾರಿಗಳಿಗೆ ರೈತರು ದೂರು ನೀಡಿದ್ದರು.
ಈ ಹಿನ್ನಲೆ ಅಧಿಕಾರಿಗಳು ಬೂಸ್ಟರ್ ಆಳವಡಿಸಲು ಹೋಗಿದ್ದಂತಹ ವೇಳೆಯೂ ವಿದ್ಯುತ್ ಟ್ರಾನ್ಸ್ಫರ್ ನಲ್ಲಿ ದಿಡೀರ್ ಬೆಂಕಿ ಬಿದ್ದು ಅದು ಕೂಡ ಸುಟ್ಟು ಹೋಗಿತ್ತು. ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ರೈತರು ರಾಮಾಪುರ ಉಪ ಕೇಂದ್ರದ ಜೆಇ ನವೀನ್, ಪವರ್ ಮ್ಯಾನ್ ಗಳಾದ ರಾಜಶೇಖರ್ ನಾಯಕ್, ರಮೇಶ್ ಮಡಿವಾಳರ್, ಕುಮಾರ್ ರವರುಗಳನ್ನು ಗ್ರಾಮದಲ್ಲಿಯೆ ದಿಗ್ಬಂಧನ ವಿಧಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಿಮ್ಮನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ತದ ನಂತರ ಹಿರಿಯ ಅಧಿಕಾರಿಗಳ ಭರವಸೆ ಬಳಿಕ ದಿಗ್ಬಂಧನ ತೆರವು ಮಾಡಲಾದ ಘಟನೆ ನಡೆದಿದೆ.
