[t4b-ticker]

ನಗರದ ಎಲ್ಲಾ ಶುದ್ದ ಕುಡಿಯುವ ನೀರಿನ ಘಟಕಗಳ ಸಮೀಕ್ಷೆ ನಡೆಸಿ ವರದಿ ಕೊಡಿ: ತುಷಾರ್ ಗಿರಿ ನಾಥ್

1 min read
Share it

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಮೀಕ್ಷೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ 8 ವಲಯಗಳಲ್ಲಿ ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ, ಎಷ್ಟು ಸುಸ್ಥಿತಿಯಲ್ಲಿವೆ, ಎಷ್ಟು ಸ್ಥಗಿತವಾಗಿವೆ ಎಂಬುದರ ಕುರಿತು ಸಮೀಕ್ಷೆ ನಡೆಸಿ ವಾರದೊಳಗಾಗಿ ವರದಿ ನೀಡಲು ಸೂಚಿಸಲಾಗಿದೆ ಎಂದರು.

 

ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸಂಬಂಧಿಸಿದಂರೆ ಎಲ್ಲಾ ವಲಯಗಳಲ್ಲಿ ಟೆಂಡರ್ ಕರೆದು ಗುತ್ತಿಗೆದಾರರನ್ನು ನಿಯೋಜಿಸಿದ್ದು, ಅವರ ಮೂಲಕ ಘಟಕಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಈ ಸಂಬಂಧ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ-ಗತಿಗಳ ಕುರಿತು ವರದಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು. ನಗರದಲ್ಲಿ ಕಾವೇರಿ 5 ಹಂತವು ಈಗಾಗಲೇ ಚಾಲ್ತಿಯಲ್ಲಿರುವುದರಿಂದ, 1ನೇ ಏಪ್ರಿಲ್ 2025 ರಿಂದ ಕುಡಿಯುವ ನೀರಿನ ಸಂಪೂರ್ಣ ಜವಾಬ್ದಾರಿ ಜಲಮಂಡಳಿ ಇಲಾಖೆಯದ್ದೇ ಆಗಿರುತ್ತದೆ.

 

ಈ ಸಂಬಂಧ ಪಾಲಿಕೆಯ ಒಡೆತನದಲ್ಲಿದ್ದ ಬೋರ್ ವೆಲ್ ಗಳನ್ನು ಹಸ್ತಾಂತರಿಸುವ ಸಂಬಂಧ ಜಲಮಂಡಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಅದರ ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಾ 1ನೇ ಏಪ್ರಿಲ್ 2025 ವೇಳೆಗೆ ಜಲಮಂಡಿಗೆ ಹಸ್ತಾಂತರಿಸಲಾಗುವುದೆಂದು ತಿಳಿಸಿದರು. ಕುಡಿಯುವ ನೀರಿನ ವಿಚಾರವನ್ನು ಇನ್ನು ಮುಂದೆ ಸಂಪೂರ್ಣವಾಗಿ ಜಲಮಂಡಳಿಯೇ ನಿರ್ವಹಣೆ ಮಾಡಲಿದೆ. ಕುಡಿಯುವ ನೀರಿನ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗದಿಂದ ಪಾಲಿಕೆಗೆ ಬರುವ ಅನುದಾನವನ್ನು ಜಲಮಂಡಳಿಗೆ ವರ್ಗಾಯಿಸಲಾಗುವುದೆಂದು ಹೇಳಿದರು.

 

ಆಸ್ತಿ ತೆರಿಗೆಯಿಂದ ಹೊರಗುಳಿದ ಆಸ್ತಿಗಳ ಸೇರ್ಪಡೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ(ಇದುವರೆಗೆ ಖಾತೆ ಮಾಡಿಸಿಕೊಳ್ಳದಿರುವವರು) ಆಸ್ತಿಗಳನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಹೊಸ ಖಾತಾ ಪಡೆಯುವ ಸಲುವಾಗಿ ವೆಬ್ ಸೈಟ್(https://BBMP.karnataka.gov.in/NewKhata)ಕೂಡಾ ಬಿಡುಗಡೆಗೊಳಿಸಿದ್ದು, ಅದರ ಮೂಲಕ ಹೊಸದಾಗಿ ಖಾತಾ ಪಡೆದುಕೊಳ್ಳಬಹುದಾಗಿದೆ. ಅದರಂತೆ ಈಗಾಗಲೇ ಸದರಿ ವೆಬ್ ಸೈಟ್ ಮೂಲಕ ಹೊಸದಾಗಿ 10 ಸಾವಿರ ಆಸ್ತಿ ಮಾಲೀಕರು ಖಾತಾ ಪಡೆದಿದ್ದಾರೆ.

 

ಅದರಂತೆ, ಒಂದು ಪರಿಹಾರ ಯೋಜನೆ(OTS) ಜಾರಿಯಿದ್ದ ವೇಳೆಯೂ ಖಾತೆ ಮಾಡಿಕೊಳ್ಳಲು ಅವಕಾಶ ನೀಡಿದ್ದ ವೇಳೆ ಸುಮಾರು 80 ಸಾವಿರ ಆಸ್ತಿ ಮಾಲೀಕರು ಖಾತೆ ಮಾಡಿಸಿಕೊಂಡಿದ್ದಾರೆ. ನಗರದಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಆಯಾ ವಲಯಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈ ಪೈಕಿ 1 ಲಕ್ಷ ಆಸ್ತಿಗಳನ್ನು ಸೇರ್ಪಡೆ ಮಾಡಿದಲ್ಲಿ ಸುಮಾರು 100 ಕೋಟಿ ರೂ. ಆಸ್ತಿ ತೆರಿಗೆ ಪಾಲಿಗೆಗೆ ಬರಲಿದೆ ಎಂದು ತಿಳಿಸಿದರು.

 

ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಸತೀಶ್, ಸ್ನೇಹಲ್, ರಮ್ಯಾ, ಕರೀಗೌಡ, ದಿಗ್ವಿಜಯ್ ಬೋಡ್ಕೆ, ಎಲ್ಲಾ ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?