ಆನೇಕಲ್ ಹುಲಿಮಂಗಲ ಪಿಡಿಒ ವಿರುದ್ದ ಕದಸಂಸ ಪರಿವರ್ತನಾವಾದ ಪ್ರತಿಭಟನೆ.
ಆನೇಕಲ್,ಫೆ,೦೬: ತಾಲ್ಲೂಕಿನ ಹುಲಿಮಂಗಲ ಗ್ರಾಮ ಪಂಚಾಯಿತಿ ಪಿಡಿಒ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪರಿವರ್ತನವಾದ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.
ರಾಜ್ಯ ಪ್ರಧಾನ ಸಂಚಾಲಕ ಎಂ.ಗೋವಿಂದರಾಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ದಲಿತ ಸಮುದಾಯದ ಮನೆಗಳಿಗೆ ನೀರು ಬಿಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಕೊಪ್ಪ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಾಜೇಶ್ವರಿ ಅವರ ಮನೆಗೆ ನೀರಿನ ಸಂಪರ್ಕ ಕಲ್ಪಿಸಿ ಎಂದು ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಅಲ್ಲದೆ ಸರ್ವೆ ನಂ.೧೨೧/೧ಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡಿ ವಾಸ್ತವಾಂಶವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಇಲ್ಲಿಯವರೆಗೂ ಸ್ಥಳ ಪರಿಶೀಲನೆಗೆ ಆಗಮಿಸಿಲ್ಲ. ದಲಿತ ಸಮುದಾಯವೆಂದರೆ ಅಧಿಕಾರಿಗಳಿಗೆ ತಾತ್ಸಾರ ಭಾವನೆ ಮನೆ ಮಾಡಿದೆ. ಈ ಬಗ್ಗೆ ಸರಕಾರದ ಉನ್ನತ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
